ಮೀನುಗಾರಿಕಾ ಬೋಟ್‍ಗಳಿಗೆ ನಿರಂತರ ಡೀಸೆಲ್ ಪೂರೈಕೆಗೆ ಸ್ಪೀಕರ್ ಖಾದರ್ ಸೂಚನೆ

Spread the love

ಮಂಗಳೂರು: ನಗರದ ಮೀನುಗಾರಿಕಾ ಬಂದರ್ ನಿಂದ ಹೊರಡುವ ಬೋಟ್‍ಗಳಿಗೆ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಳನ್ನು ನಿರಂತರವಾಗಿ ಒದಗಿಸಲು ಸ್ಪೀಕರ್ ಯು. ಟಿ ಖಾದರ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರಿಕಾ ಸಂಘಟನೆಗಳು, ಬೋಟ್ ಮಾಲೀಕರು, ತೈಲ ಕಂಪನಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅವರು ಮಾತನಾಡಿದರು.

ಮೀನುಗಾರಿಕಾ ಬೋಟುಗಳಿಗೆ ಯಾವುದೇ ರೀತಿಯಲ್ಲಿ ಡೀಸೆಲ್ ಕೊರತೆಯಾಗದಂತೆ ಸರಬರಾಜು ಮಾಡಬೇಕು. ಹಳೆ ಬಂದರಿನಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಡೀಸೆಲ್ ಔಟ್‍ಲೆಟ್ ಅನ್ನು ಪುನಃ ತೆರೆಯಬೇಕು. ಇದಕ್ಕೆ ಅಗತ್ಯವಾದ ಕೋಡ್ ಸಂಖ್ಯೆಯನ್ನು ತುರ್ತಾಗಿ ನೀಡಬೇಕು. ಡೀಸೆಲ್ ಸರಬರಾಜು ಮಾಡಬೇಕು ಎಂದು ತೈಲ ಕಂಪನಿಗಳಿಗೆ ಹಾಗೂ ಮೀನುಗಾರಿಕೆ ನಿರ್ದೇಶಕರಿಗೆ ಸೂಚಿಸಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಂತರ ಮೀನುಗಾರಿಕಾ ಬೋಟ್‍ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು, ಇದರಿಂದ ಮೀನುಗಾರಿಕಾ ಬೋಟ್‍ಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಮೀನುಗಾರಿಕಾ ಉದ್ಯಮ ತೀರಾ ಸಮಸ್ಯೆ ಎದುರಿಸುತ್ತಿದೆ ಎಂದು ಮೀನುಗಾರ ಮುಖಂಡರು ಸಭೆಯಲ್ಲಿ ತಿಳಿಸಿದರು.

ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಅವರು ಮಾತನಾಡಿ, ಡೀಸೆಲ್ ದರ ಹೆಚ್ಚಳದಿಂದ ಆಗುವ ನಷ್ಟವನ್ನು ಸರ್ಕಾರವು ಭರಿಸಬೇಕೆಂದು ಕೋರಿದರು.

ತೈಲ ಕಂಪನಿಗಳ ಪ್ರತಿನಿಧಿಗಳು ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರದ ಸುತ್ತೋಲೆ ಅನ್ವಯ, ಒಟ್ಟು ವಿತರಣೆಯ ಶೇ 20 ರಷ್ಟು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಇಂದಿರಾ ಕ್ಯಾಂಟಿನ್, ರೆಸ್ಟೋರೆಂಟ್ ಮತ್ತು ಮೀನುಗಾರಿಕೆ ಮುಂತಾದವುಗಳು ಇರುವುದರಿಂದ ಆದ್ಯತೆಯಲ್ಲಿ ಪರಿಗಣಿಸಿ ಎಲ್.ಪಿ.ಜಿ ಸಿಲಿಂಡರ್ ಗಳನ್ನು ವಿತರಿಸುವುದಾಗಿ ತಿಳಿಸಿದರು.

ಮೀನುಗಾರರು ಮೀನುಗಾರಿಕೆಗೆ ತೆರಳುವಾಗ ಅಡುಗೆಗಾಗಿ ಕೊಂಡೊಯ್ಯುವ ಎಲ್.ಪಿ.ಜಿ ಸಿಲಿಂಡರ್ ಳಲ್ಲಿಯೂ ಯಾವುದೇ ಕೊರತೆ ಆಗದಂತೆ ಕನಿಷ್ಠ 130 ರಿಂದ 150 ಸಿಲಿಂಡರ್ ಗಳನ್ನು ಮೀನುಗಾರರಿಗೆ ಸರಬರಾಜು ಮಾಡುವಂತೆ ನೋಡಿಕೊಳ್ಳಬೇಕು. ಧಕ್ಕೆಯಿಂದ ಹೊರಡುವ ಬೋಟ್‍ಗಳಿಗೆ ಪ್ರತಿ ಬೋಟ್‍ಗೆ 1 ಸಿಲಿಂಡರ್ ನಂತೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಸಿಲಿಂಡರ್ ಒದಗಿಸಲು ಸ್ಪೀಕರ್ ಖಾದರ್ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ ಪ್ರತಿ ಜಿಲ್ಲೆಗೆ ನೀಡುವ ಕೋಟಾದಲ್ಲಿ ಮೀನುಗಾರಿಕೆಗಾಗಿ 130 ರಿಂದ 150 ಸಿಲಿಂಡರ್ ಗಳನ್ನು ಮೀನುಗಾರರಿಗೆ ಒದಗಿಸುವಂತೆ ಮತ್ತು ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳು ತೈಲ ಕಂಪನಿಗಳೊಂದಿಗೆ ವ್ಯವಹರಿಸಲು ಸೂಚಿಸಿದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಾತನಾಡಿ, ನಿಗಮದ ಮೂಲಕ ಡೀಸೆಲ್ ವಿತರಣೆ ಏಜನ್ಸಿ ಈಗಾಗಲೇ ಇದ್ದು, ಇದಕ್ಕಾಗಿ ಕೋಡ್ ನಂಬರ್ ಪಡೆದ ನಂತರ ಇಲಾಖೆಯಿಂದ ಡೀಸೆಲ್ ಕೋಟಾ ಪಡೆದು ಮೀನುಗಾರರಿಗೆ ಡೀಸೆಲ್ ನೀಡಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *