ಬಳ್ಕೂರು ಯಕ್ಷ ಕುಸುಮ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ

2404

ಮಂಗಳೂರು: ಕಲೆ ಇದ್ದ ಹಾಗೆ ಇದ್ರೆ ಅದು ಭಜನೆ ಆಗುತ್ತದೆ, ಪ್ರತಿಭೆ ಇಟ್ಟುಕೊಂಡು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಈ ಕಲೆ ಸಾಕ್ಷಿ. ಹಲವು ವರ್ಷಗಳಿಂದ ಸಾವಿರಾರು ಕಲಾವಿದರು ಯಕ್ಷರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ. ಜಗತ್ತಿನ ಯಾವುದೇ ಕಲೆಗೂ ಕೂಡ ಯಕ್ಷಗಾನಕ್ಕೆ ಇರುವ ಶಕ್ತಿ ಇನ್ನೂ ಯಾವ ಕಲೆಯಲ್ಲಿಯೂ ಇಲ್ಲ ಎಂದು ಹಿರಿಯ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಅವರು ಹೇಳಿದರು.

ನಗರದ ಕೊಡಿಯಾಲ್ ಬೈಲ್ ಕುದ್ರೋಳಿ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ಯಕ್ಷ ಕುಸುಮ ಚಾರಿಟಬಲ್ ಟ್ರಸ್ಟ್ ಮತ್ತು ರಂಗಸ್ಥಳ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಆಶ್ರಯದಲ್ಲಿ ನಡೆದ ‘ಬಳ್ಕೂರು ಯಕ್ಷ ಕುಸುಮ’ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ನಾನು ವಿದ್ವಾಂಸನಲ್ಲ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಒಬ್ಬ ಕೆಲಸಗಾರ ಅಷ್ಟೇ. ಕಳೆದ 60 ವರ್ಷಗಳಿಂದ ಯಕ್ಷಗಾನ ಕಲೆಗಾಗಿ ನನ್ನ ಬದುಕನ್ನು ಸಮರ್ಪಿಸಿದ್ದೇನೆ. 10 ನೇ ವರ್ಷದಲ್ಲಿ ನನ್ನ ಅಜ್ಜನಿಂದ ಕಲಿತ ಅರ್ಥಗಾರಿಕೆ ಬದುಕಿಗೆ ಪೂರಕವಾಗಿದೆ. ಅಮ್ಮನಿಂದ ತುಂಬ ಸಂಸ್ಕಾರವನ್ನು ಪಡೆದಿದ್ದೇನೆ. ನನಗೆ ಮಾತನಾಡಲು ಕಲಿಸಿದವಳು ನನ್ನ ಅಮ್ಮ ಮತ್ತು ಅವಳ ಸೊಸೆ. ಒಬ್ಬರು ಮಾತನಡಲು ಕಲಿಸಿದರೆ ಇನ್ನೊಬ್ಬರು ಸುಮ್ಮನೆ ಕುಳಿತುಕೊಳ್ಳುವುದು ಹೇಗೆ ಎನ್ನುವುದುನ್ನು ಕಲಿಸಿದ್ದಾರೆ. ಮನೆಯವರಿಗೆಲ್ಲ
ನಾನು ಕೃತಜ್ಞನಾಗಿದ್ದೇನೆ. ಮತ್ತೆ ಹೀಗೆ ನಾನು ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯಲು ಯಾರ ಹೆಗಲಮೇಲೆ ಇದ್ದೇನೋ ಎಲ್ಲಾ ಕಲಾವಿದರಿಗೆ, ಪ್ರೇಕ್ಷಕರಿಗೆ, ಪೋಷಕರಿಗೆ, ಅಭಿಮಾನಿಗಳಿಗೆ ಈ ದಿನ ಪಡೆದ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ಅಂತೆಯೇ ಇಂದು ಸಿಕ್ಕಿರುವ ಈ ಪ್ರಶಸ್ತಿಯ ಮೊತ್ತವನ್ನು ನನ್ನ ಮುಂದಿನ ಪುಸ್ತಕದ ಪ್ರಕಟಣೆಗಾಗಿ ಉಪಯೋಗಿಸುತ್ತೇನೆ ಎಂದು ಹೇಳಿದರು.

WhatsApp Image 2026 03 23 at 7.48.41 AM

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಂಸ್ಕೃತಿಯನ್ನು, ವಿಚಾರಧಾರೆಗಳನ್ನು ಉಳಿಸಿಕೊಳ್ಳಬೇಕು ಎಂಬ ಮಾರ್ಗದಲ್ಲಿ ಯಕ್ಷಕುಸುಮ ಚಾರಿಟೇಬಲ್ ಟ್ರಸ್ಟ್ನವರು ಪೌರಾಣಿಕ ಯಕ್ಷಗಾನವನ್ನು ಕಳೆದ 4 ವರ್ಷಗಳಿಂದ ನಡೆಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದು ಅಭಿನಂದನೆಯನ್ನು ಸಲ್ಲಿಸಿದರು.

ಬಳ್ಕೂರು ಯಕ್ಷ ಕುಸುಮ ಪುರಸ್ಕಾರವನ್ನು ಚಿಂತಕ, ಅರ್ಥವಿಹಾರಿ ಡಾ. ಎಂ.ಪ್ರಭಾಕರ ಜೋಶಿ ಅವರಿಗೆ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಜನಾರ್ದನ ಹಂದೆ ಯಕ್ಷ ಕುಸುಮ ಕವಿತೆ ವಾಚಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಗಾನಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.

ಮಂಗಳೂರಿನ ಹಿರಿಯ ಲೆಕ್ಕಪರಿಶೋಧಕ ಎಸ್ ಎಸ್ ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಎಸ್. ಎಲ್. ನಾಯಕ್ ಮತ್ತು ದಿನೇಶ್ ಪೈ, ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಮೇಳದ ಯಜಮಾನ ರಂಜಿತ್ ಕುಮಾರ್ ವಕ್ವಾಡಿ, ಬಳ್ಕೂರು ಯಕ್ಷ ಕುಸುಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕರುಣಾಕರ ಬಳ್ಕೂರು ಇದ್ಧರು.

ಸಭಾ ಕಾರ್ಯಕ್ರಮದ ಬಳಿಕ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನವಾಗಿ ದ್ರೌಪದಿ ಪ್ರತಾಪ ಮತ್ತು ವಿದ್ಯುಜ್ಜಿಹ್ವ ಎಂಬ ಪೌರಾಣಿಕ ಕಥಾನಕ ಪ್ರದರ್ಶನಗೊಂಡಿತು.

ದ್ರೌಪದಿ ಪ್ರತಾಪ ಪ್ರಸಂಗದಲ್ಲಿ ಅತಿಥಿ ಕಲಾವಿದರಾಗಿ ಅಶ್ವಿನಿ ಕೊಂಡದಕುಳಿ ಅವರು ದ್ರೌಪದಿ ಪಾತ್ರವನ್ನು ನಿರ್ವಹಿಸಿದರು. ಅಂತೆಯೇ ಮೆಕ್ಕೆಕಟ್ಟು ಮೇಳದ ಸುಪ್ರಸಿದ್ಧ ಕಲಾವಿದ ನಾಗರಾಜ್ ಭಂಡಾರಿ, ರಾಜೇಶ್ ಭಂಡಾರಿ, ಹಳ್ಳಾಡಿ ಜಯರಾಮ್ ಶೆಟ್ಟಿ, ಗಾಂವಕ್ಕರ್ ಸೇರಿದಂತೆ ಭಾಗವತ ಸುಧೀರ್ ಭಟ್ ಪೆರ್ಡೂರು, ಸುರೇಶ್
ಭದ್ರಾಪುರ ಸೇರಿದಂತೆ ಇತರ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಕನ್ನಡ ಉಪನ್ಯಾಸಕ ಕೃಷ್ಣಭಟ್ ಸುಣ್ಣಂಗುಳಿ ಅವರು ಕಾರ್ಯಕ್ರಮ ನಿರೂಪಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma