ಕಾರವಾರ: ಪ್ರತಿಯೊಬ್ಬ ವ್ಯಕ್ತಿಯೂ ಗೌರವ ಮತ್ತು ಸಂತೋಷದಿಂದ ಬದುಕಲು ಇರುವ ಹಕ್ಕುಗಳು ಮಾನವ ಹಕ್ಕು, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ಇವುಗಳನ್ನು ರಕ್ಷಿಸುವ ಸಂರಕ್ಷಣಾಧಿಕಾರಿಗಳಿದ್ದು, ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶ್ಯಾಮ್ ಭಟ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಪ್ರಕರಣಗಳ ವಿಚಾರಣೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಸರ್ಕಾರ ಜಾರಿಗೆ ತರುವ ಜನೋಪಯೋಗಿ ಯೋಜನೆಗಳು ಮತ್ತು ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೇ ಸಾರ್ವಜನಿಕರಿಗೆ ಒದಗಿಸಬೇಕು, ಯಾವುದೇ ಒತ್ತಡದಲ್ಲಿದ್ದರೂ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ತಾಳ್ಮೆ ಮತ್ತು ಸೌಜನ್ಯದೊಂದಿಗೆ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅಗತ್ಯ ನೆರವು ಒದಗಿಸಬೇಕು ಎಂದರು.
ಮಾನವ ಹಕ್ಕು ಉಲ್ಲಂಘನೆ ಕುರಿತಂತೆ ಆಯೋಗದಲ್ಲಿ ಪ್ರತೀ ತಿಂಗಳು 500 ದೂರುಗಳು ಸ್ವೀಕರವಾಗುತ್ತಿದ್ದು, ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ 29 ಜಿಲ್ಲೆಗಳಲ್ಲಿ ಭೇಟಿ ನೀಡಿದ್ದು, ಆಯೋಗದಲ್ಲಿ ಈ ಹಿಂದೆ ದಾಖಲಾಗಿದ್ದ 8000 ಪ್ರಕರಣಗಳಲ್ಲಿ ಪ್ರಸ್ತುತ 3000 ಇತ್ಯರ್ಥಪಡಿಸಲು ಬಾಕಿ ಇದೆ ಎಂದರು.
ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ ಒಟ್ಟು 30 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಇಂದು ನಡೆದ ವಿಚಾರಣೆಯಲ್ಲಿ ಎಲ್ಲಾ ಪ್ರಕರಣಗಳ ಸಂಪೂರ್ಣ ವಿಚಾರಣೆ ನಡೆಸಲಾಗಿದೆ. ಈ ಎಲ್ಲಾ ಪ್ರಕರಣಗಳ ಕುರಿತಂತೆ ಜಿಲ್ಲಾಡಳಿತವು ವಿವರವಾದ ವರದಿಯನ್ನು ಸಲ್ಲಿಸಿದ್ದು, ಬಹುತೇಕ ಎಲ್ಲಾ ಪ್ರಕರಣಗಳು ಇತ್ಯರ್ಥವಾಗಲಿದ್ದು, ಆಯೋಗದಿಂದ ಅಂತಿಮ ವರದಿ ಸಲ್ಲಿಸಲಾಗುವುದು. ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಆಯೋಗದೊಂದಿಗೆ ಸಹಕರಿಸಿದ
ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಹೊಸದಾಗಿ
ನಿರ್ಮಾಣವಾಗುತ್ತಿರುವ ಪಕ್ಕದ ಕಟ್ಟಡಕ್ಕೆ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ, ಕ್ರಿಮ್ ನಲ್ಲಿ ರೇಡಿಯಾಲಜಿಸ್ಟ್ ಹುದ್ದೆಯನ್ನು ಭರ್ತಿ ಮಾಡುವ ಬಗ್ಗೆ, ಜಿಲ್ಲಾ ಕಾರಾಗೃಹವನ್ನು ಶೀಘ್ರದಲ್ಲಿ ನವೀಕರಣಗೊಳಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.
ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಜೀವನ ನಿರ್ವಹಣೆಗೆ ಸಮಾನ ಅವಕಾಶಗಳು ದೊರೆಯಬೇಕು ಎನ್ನುವುದು ಆಯೋಗದ ಉದ್ದೇಶವಾಗಿದ್ದು, ಆಯೋಗದಲ್ಲಿ ಸಲ್ಲಿಕೆಯಾಗುವ ದೂರುಗಳಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರುಗಳು
ಅಧಿಕವಾಗಿದ್ದು, ನಂತರದಲ್ಲಿ ಕಾರಾಗೃಹ, ಕಂದಾಯ, ಅರಣ್ಯ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳು ಇವೆ. ಮಾನವ ಹಕ್ಕು ಉಲ್ಲಂಘನೆ ಕುರಿತ ದೂರುಗಳು ಸಲ್ಲಿಕೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯಲಾಗುವುದು, ಲೋಪಗಳು ಕಂಡು ಬಂದಲ್ಲಿ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮತ್ತು ನೊಂದ ವ್ಯಕ್ತಿಗೆ ಅಗತ್ಯ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರು.





