ಮಂಗಳೂರು: ಎಂ.ಎನ್.ಆರ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಹಾಸ್ಯಮಯ ಸಿನಿಮಾ ವಾದಿರಾಜ ವಾಲಗ ಮಂಡಳಿ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ಅಗಸ್ಟ್ ನಲ್ಲಿ ರಾಜ್ಯದಾದ್ಯಂತ ಅದ್ಧೂರಿ ಬಿಡುಗಡೆ ಆಗಲಿದ್ದು, ಕನ್ನಡದ ಜತೆಗೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಚಿತ್ರ ನಿರ್ಮಾಪಕ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರಾಹ ರೂಪಂ” ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಕರಾವಳಿ ಕನ್ನಡದ ಸೊಗಡಿನೊಂದಿಗೆ, ರಾಜ್ಯದ ಎಲ್ಲ ಭಾಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಹಾಸ್ಯ, ಭಾವನಾತ್ಮಕ ಅಂಶಗಳು ಮತ್ತು ಸಾಮಾಜಿಕ ಹಿನ್ನೆಲೆ ಒಳಗೊಂಡ ಮನೋರಂಜನಾ ಪ್ಯಾಕೇಜ್ ಈ ಸಿನಿಮಾದಲ್ಲಿ ಪ್ರೇಕ್ಷಕರು ಕಾಣಬಹುದು ಎಂದರು.
ಚಿತ್ರದಲ್ಲಿ ಕರಾವಳಿಯ ಜನಪ್ರಿಯ ಕಲಾವಿದರ ದೊಡ್ಡ ಪಡೆಯೇ ಇದೆ. ‘ಗುಂಡುಮಾಮ’ ಖ್ಯಾತಿ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದು, ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೋಳಾರ್ ಹಾಸ್ಯದ ಹೊನಲು ಹರಿಸಲಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಹಾಗೂ ತನ್ವಿ ರಾವ್ ಮತ್ತು ವೆನ್ಯ ರೈ ನಾಯಕಿಯರಾಗಿ ಚಿತ್ರದಲ್ಲಿ ನಟಿಸಲಿದ್ದಾರೆ. ಲಕ್ಷ್ಮಣ್ ಕುಮಾರ್ ಮಲ್ಲೂರು, ಶೋಭರಾಜ್ ಪಾವೂರು, ಚೇತನ್ ರೈ ಮಾಣಿ ಸೇರಿದಂತೆ ಹಲವು ಅನುಭವಿ ನಟರು ತಂಡವು ಸಿನಿಮಾದಲ್ಲಿದೆ ಎಂದರು.
ಸಿನಿಮಾ ಚಿತ್ರೀಕರಣಕ್ಕೆ ಹೈ-ಬಜೆಟ್ ಸಿನಿಮಾಗಳಲ್ಲಿ ಬಳಸುವ ವಿಶೇಷ ಕ್ಯಾಮೆರಾ ಬಳಸಲಾಗಿದೆ. ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ‘ಸವಾರಿ’ ಖ್ಯಾತಿ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದು, ವಿಪ್ಪೇಶ್ ಹಾಗೂ ಮೈಮ್ ರಾಮದಾಸ್ ಸೇರಿದಂತೆ ಹಿಂದಿ ಚಿತ್ರರಂಗದ ಪ್ರಮುಖ ಗಾಯಕರು ಹಾಡುಗಳಿಗೆ ಧ್ವನಿ ಆಗಿದ್ದಾರೆ. ಸಾಹಸವನ್ನು ಟೈಗರ್ ಶಿವು ನಿರ್ದೇಶನ ಮಾಡಿದ್ದಾರೆ ಎಂದರು.
ನಿರ್ದೇಶಕ ಶಶಿರಾಜ್ ಕಾವೂರು ಮಾತನಾಡಿ, ಮೊದಲ ಬಾರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಿರ್ದೇಶನ ಸಾಕಷ್ಟು ಸವಾಲಿನ ಕೆಲಸ ಆಗಿದ್ದು, 50 ದಿನಗಳಲ್ಲಿ ಚಿತ್ರೀಕರಣ ನಡೆದಿದೆ. ವಾಲಗ ಮಂಡಳಿ ಸುತ್ತ ಹೆಣೆಯಲಾದ ಚಿತ್ರ ಉತ್ತಮ ಸಂದೇಶದ ಎಳೆಯೊಂದಿಗೆ ಹಾಸ್ಯಮಯವಾಗಿ, ಸಾಕಷ್ಟು ತಿರುವು ಹೊಂದಿದೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇದೆ. ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಜತೆಗೆ ಬ್ಯಾಂಕ್ ನಿರ್ದೇಶಕರುಗಳೂ ಸಹ ಎಲ್ಲ ರೀತಿಯ ಸಹಕಾರ ನೀಡಿರುವುದರಿಂದ ಚಿತ್ರದ ಕೆಲಸ ಯಶಸ್ವಿಯಾಗಿ ನಡೆದಿದೆ ಎಂದರು.
ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಅರ್ಜುನ್ ವೇದಾಂತ್, ವೆನ್ಯ ರೈ, ಮೈಮ್ ರಾಮದಾಸ್, ರಾಜೇಶ್ ಕುಡ್ಡ, ಶೋಭರಾಜ್ ಪಾವೂರು, ಸಹ ನಿರ್ದೇಶಕ ಅಕ್ಷತ್ ವಿಟ್ಲ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಳ್ಕೊಟ್ಟು ಇದ್ದರು.





