ಎಡಗೈ ಶೇ 5.25, ಬಲಗೈ ಶೇ 5.25, ಇತರೆ ಸಮುದಾಯಕ್ಕೆ ಶೇ 4.5 ಮೀಸಲಾತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

WhatsApp Image 2026 04 24 at 6.04.45 PM

ಬೆಂಗಳೂರು: ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇಂದಿನ ಸಚಿವ ಸಂಪುಟ ಸಭೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಡ, ಬಲ ಹಾಗೂ ಇತರೆ ಸಮುದಾಯಗಳಿಗೆ 5.25:5.25:4.5 ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೀಸಲಾತಿಯನ್ನು ಶೇ 50 ಕ್ಕೆ ಮಿತಿಗೊಳಿಸುವ ಹೈಕೋರ್ಟ್ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿ ಒಳಗೆ ಒಳ ಮೀಸಲಾತಿಯನ್ನು ಮರು ನಿಗದಿ ಪಡಿಸಿ ಪರಿಶಿಷ್ಟ ಜಾತಿಗೆ ಶೇ 15 ಹಾಗೂ ಪರಿಶಿಷ್ಟ ವರ್ಗಗಳಿಗೆ ಶೇ 3 ರಷ್ಟು ಮೀಸಲಾತಿ ನೀಡಲಾಗಿದೆ. ಒಳಮೀಸಲಾತಿಗೆ ರಚಿಸಲಾಗಿದ್ದ ಕಾಯ್ದೆಗೆ ಅನುಗುಣವಾಗಿ ಶೇ 17 ಮೀಸಲಾತಿಗೆ 6:6:5 ಇದ್ದರೆ, ಇದೀಗ ಶೇ 15 ಮೀಸಲಾತಿಗೆ 5.3, 5.3 ಹಾಗೂ 4.4 ಮೀಸಲಾತಿಯನ್ನು ನಿಗದಿ ಮಾಡಿ ವರದಿ ನೀಡಲಾಗಿದ್ದು, ಅಂತಿಮವಾಗಿ ಸಚಿವ ಸಂಪುಟ ಸಭೆಯು ಎಡಗೈ ಸಂಬಂಧಿತ ಜಾತಿಗಳಿಗೆ 5.25, ಬಲಗೈ ಜಾತಿಗಳಿಗೆ 5.25 ಭೋವಿ , ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು ಸೇರಿ 4.5 ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ಸಿಗಲಿದೆ.  ನೇಮಕಾತಿ ಮಾಡುವ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಇದರನ್ವಯ ನಿರ್ಧರಿಸಬೇಕು. ಶೇ  6 ರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್  ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರೆಗೆ ಬ್ಯಾಕ್ ಲಾಗ್ ಎಂದು ಪರಿಗಣಿಸಲಾಗುವುದು ಎಂದರು.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿಯೇ ಮಹತ್ವಪೂರ್ಣ ನಿರ್ಧಾರ ಇದಾಗಿದ್ದು, ರೋಸ್ಟರ್ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಕೈಗೊಂಡು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ತಿರುವು ನೀಡಲಾಗುತ್ತಿದೆ ಎಂದರು.

ಒಳಮೀಸಲಾತಿ ಕುರಿತು ಬಹುಕಾಲದಿಂದ ಅನೇಕ ಹೋರಾಟಗಳು ನಡೆದಿವೆ. ನಂತರ ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿತ್ತು . ‌ ಈ ಸಮಾವೇಶದಲ್ಲಿ 101 ಪರಿಶಿಷ್ಟ ಜಾತಿಗಳು ಸೇರಿದಂತೆ ಅಲೆಮಾರಿ ಸೇರಿದಂತೆ 59 ಜಾತಿಗಳ ಪ್ರತಿನಿಧಿಗಳು ಪಾಲ್ಗೊಂಡು ಒಳಮೀಸಲಾತಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು ಎಂದು ವಿವರಿಸಿದ ಮುಖ್ಯಮಂತ್ರಿಗಳು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಣಾಳಿಕಾ ಸಮಿತಿಯಲ್ಲಿಯೂ ಒಳಮೀಸಲಾತಿಯನ್ನು ಸರ್ಕಾರ ನೀಡಲಿದೆ ಎಂಬ ಭರವಸೆ ನೀಡಲಾಗಿತ್ತು ಎಂದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma