ಮಂಗಳೂರು: ತುಂಬೆ ಕಿಂಡಿ ಅಣೆಕಟ್ಟೆಹಾಗೂ ಎಎಂಆರ್ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 10 ರವರೆಗೂ ನೀರು ಪೂರೈಕೆ ಮಾಡಲು ನೀರಿನ ಸಂಗ್ರಹ ಇದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುರತ್ಕಲ್ ಮೊದಲಾದ ಪ್ರದೇಶಗಳಿಗೂ ಸೂಕ್ತ ನೀರು ಪೂರೈಕೆ ಮಾಡುವ ಉದ್ದೇಶದಿಂದ ಮೇ 1ರಿಂದ ರೇಶನಿಂಗ್ ವ್ಯವಸ್ಥೆ ಅಡಿಯಲ್ಲಿ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ಅವರು ಶುಕ್ರವಾರ ಫೋನ್ ಇನ್ ಕಾರ್ಯಕ್ರಮದ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದರು.
ತುಂಬೆಯಿಂದ ಪ್ರಸಕ್ತ 160 ಎಂಎಲ್ಡಿ ನೀರು ಪಂಪಿಂಗ್ ಮಾಡಲಾಗುತ್ತಿದ್ದು, ನೀರು ಪಂಪಿಂಗ್ ಪ್ರತಿನಿತ್ಯ ಮುಂದುವರೆಯಲಿದೆ. ಆದರೆ ಪೂರೈಕೆಯಲ್ಲಿ ಕೆಲ ಗಂಟೆಗಳ ಕಾಲ ಕೆಲ ಪ್ರದೇಶಗಳಿಗೆ ಸೀಮಿತವಾಗಿ ನೀರು ಪೂರೈಕೆ ಆಗಲಿದೆ. ಇದರಿಂದ ಕನಿಷ್ಠ ಎರಡು ದಿನಕ್ಕೆ ಒಮ್ಮೆ ಪಾಲಿಕೆ 60 ವಾರ್ಡ್ ಗಳಿಗೂ ಸಮರ್ಪಕವಾಗಿ ನೀರು ಪೂರೈಕೆ ಆಗಲಿದೆ ಎಂದು ತಿಳಿಸಿದರು.
ಏ 24 ಕ್ಕೆ ತುಂಬೆ ಅಣೆಕಟ್ಟೆಯಲ್ಲಿ 4.53 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.53 ಮೀಟರ್ ನೀರಿನ ಸಂಗ್ರಹ ಇದೆ. ಈವರೆಗೂ ಎಎಂಆರ್ ಡ್ಯಾಂನಿಂದ ನೀರ ಅನ್ನು ತುಂಬೆಗೆ ಹರಿಸಿಲ್ಲ. ನಗರ ಮಾತ್ರವಲ್ಲದೆ, ಪಶ್ಚಿಮ ಘಟ್ಟದ ಸುತ್ತಲಿನ ಪ್ರದೇಶಗಳಲ್ಲಿ ಮಳೆ ಆಗುತ್ತಿರುವುದರಿಂದ ಅಣೆಕಟ್ಟುಗಳಿಗೆ ಒಳಹರಿವು ಇದೆ ಎಂದರು.
ನಗರಕ್ಕೆ ಪೂರೈಕೆ ಆಗುವ ನೀರಿನ ಸಂಪರ್ಕದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಸಂಪರ್ಕ ಪಡೆದಿರುವ ವಿಚಾರದಲ್ಲಿ ಈಗಾಗಲೇ ಸಭೆ ನಡೆದಿದೆ. 40 ಕ್ಕೂ ಅಧಿಕ ಕಡೆಗಳಲ್ಲಿ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ ಹಲವೆಡೆ ಹೊಸ ಅಕ್ರಮ ಸಂಪರ್ಕಗಳನ್ನು ಪಡೆದಿರುವ ಆಕ್ಷೇಪಗಳಿದ್ದು, ಅವುಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮಾನವೀಯ ದೃಷ್ಟಿಯಿಂದ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿಲ್ಲ. ಮುಂದೆ ಮೀಟರ್ ಅಳವಡಿಸಿ ಗ್ರಾಮಗಳಿಗೆ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ನಗರದಲ್ಲಿ ಪ್ರಸಕ್ತ ನಡೆಯುತ್ತಿರುವ ಜಲಸಿರಿ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಅದಾಗ್ಯೂ ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಗಾಗಿ ಅಗೆತ ಮಾಡಿರುವಲ್ಲಿ ಮೇ 20 ರೊಳಗೆ ಮುಚ್ಚುವ ಕಾರ್ಯ ನಡೆಸುವಂತೆ ಸಚನೆ ನೀಡಲಾಗಿದೆ. ಸೋಮವಾರ ಮತ್ತೆ ಈ ಬಗ್ಗೆ ಸಭೆ ನಡೆಯಲಿದೆ. ಮಳೆಗಾಲದಲ್ಲಿ ಯಾವುದೇ ಅಗೆತಕ್ಕೆ ಅವಕಾಶವಿಲ್ಲ. ಅಗೆದಿರುವುದನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದರು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಹಾಗೂ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಇದ್ದರು.





