ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿ ಪರ ನಿಂತಿಲ್ಲ: ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ

2002

ಮಂಗಳೂರು: ದೇಶದಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯ ನೀಡುವ ಕೆಲಸವನ್ನು ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ಕಡೆಗೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರ ಪುರ್ ವಿಂಗಡಣೆ ಹೆಸರಲ್ಲಿ 2023 ರಲ್ಲಿ ಅಂಗೀಕಾರಗೊಂಡಿದ್ದ ಶೇ 33 ಮಹಿಳಾ ಮೀಸಲಾತಿ ಅನುಷ್ಟಾನಗೊಳಿಸುವ ಬದಲು ನಾರಿ ಶಕ್ತಿ ವಂದನಾ ಎಂಬ ಹೆಸರಿನಲ್ಲಿ ಮತ್ತೊಮ್ಮೆ ಮಂಡನೆ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಪರವಾದ ಕಾನೂನುಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ, ನಗರ ಸಭೆ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ. ಕಾಂಗ್ರೆಸ್ ಎಂದಿಗೂ ಕೂಡ ಮಹಿಳಾ ವಿರೋಧಿಯಲ್ಲ. ಆದರೆ ಬಿಜೆಪಿಯವರು ಕಾಂಗ್ರೆಸ್ ಮಹಿಳಾ ವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸುವುವದಕ್ಕೆ ಮುಂದಾಗಿರುವುದನ್ನು ಖಂಡಿಸಲಾಗುತ್ತದೆ ಎಂದರು.

ಕ್ಷೇತ್ರ ವಿಂಗಡಣೆ ಹಾಗೂ ಜನಗಣತಿ ಜತೆಗೆ ಜೋಡಿಸಿಕೊಂಡು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಕುತಂತ್ರಕ್ಕೆ ಸೋಲಾಗಿರುವುದೇ ಹೊರತು 2023ರಲ್ಲಿ ಅಂಗೀಕಾರಗೊಂಡಿರುವ ಶೇ 33 ಮೀಸಲಾತಿ ಸರ್ವ ಪಕ್ಷಗಳಿಂದ ಅಂಗೀಕಾರಗೊಂಡಿದೆ. ಇದನ್ನು ಯಥವತ್ತಾಗಿ ಜಾರಿಗೊಳಿಸುವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡಬೇಕು ಎಂದರು.

80 ರ ದಶಕದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಹಿಳಾ ಮೀಸಲಾತಿ ಕನಸು ಕಂಡಿದ್ದರು. ಪಿ. ವಿ. ನರಸಿಂಹ ರಾವ್ ಅವರು ಪ್ರಧಾನಿ ಆಗಿದ್ದಾಗ ಸ್ಥಳೀಯಾಡಳಿತದಲ್ಲಿ ಶೇ 33 ಮಹಿಳಾ ಮೀಸಲಾತಿ ಜಾರಿಗೊಳಿಸಿರುವುದು ಕಾಂಗ್ರೆಸ್ ಸರಕಾರದ ಸಾಧನೆ. ಇದೀಗ ಕ್ಷೇತ್ರ ವಿಂಗಡನೆಯ ಮಹಿಳಾ ಮೀಸಲಾತಿಯ ವಿಧೇಯಕಕ್ಕೆ ಸೋಲಾಗಿರುವ ಬಗ್ಗೆ ಕಾಂಗ್ರೆಸ್ ವಿರುದ್ಧವೇ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಗ್ರಾಮೀಣ ಭಾಗದ ಮಹಿಳೆಯರು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಪಡೆಯುವ ಮೂಲಕ ಅಧಿಕಾರ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಹಿಂದೆಯೂ ಮಹಿಳಾ ಮೀಸಲಾತಿ ಪರ ಇತ್ತು, ಈಗಲೂ ಬೆಂಬಲ ನೀಡಲಿದೆ. ಪ್ರಿಯಾಂಕಾ ಗಾಂಧಿ ಅವರು ಈಗಾಗಲೇ ಕೇಂದ್ರಕ್ಕೆ ಬಹಿರಂಗ ಸವಾಲು ಹಾಕಿದ್ದು, ಮಹಿಳಾ ಮೀಸಲಾತಿ ಜಾರಿ ಆಗುವ ನಮ್ಮ ಕನಸು ನನಸಾಗಬೇಕು. ಸಿದ್ಧರಾಮಯ್ಯ ಸರಕಾರದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರು ಸಬಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಮೂಲಕ ರಾಜಕೀಯವಾಗಿ ಎದ್ದು ನಿಲ್ಲಲು ಅವಕಾಶ ಆಗಬೇಕು ಎಂದರು.

ಪಾಲಿಕೆ ಮಾಜಿ ಸದಸ್ಯೆ ಅಪ್ಪಿ ಸೇರಿದಂತೆ ಹಲವರು ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma