ಬೆಂಗಳೂರು: ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಭಾರೀ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಮೋಸ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕ್ರಿಸ್ಟಲ್ ಎಐ ಎಂಬ ಸಂಸ್ಥೆಯ ಮೂಲಕ ಈ ವಂಚನೆ ಜಾಲ ನಡೆಸಲಾಗಿದ್ದು, ನೂರಾರು ಜನರು ಇದಕ್ಕೆ ಬಲಿ ಆಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂಬ ಆಮಿಷ ನೀಡಿ ಜನರನ್ನು ಸೆಳೆಯಲಾಗಿದ್ದು, ರೋಬೋಟ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ಹೆಸರಿನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 5ರಿಂದ 6 ಕೋಟಿ ರೂಪಾಯಿ ವಂಚನೆ ನಡೆದಿರುವುದು ತಿಳಿದು ಬಂದಿದೆ. ಆದರೆ ಈ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಸಾಧ್ಯತೆ ಅಧಿಕಾರಿಗಳು ತಳ್ಳಿಹಾಕಿಲ್ಲ. ಪ್ರಕರಣ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಆರೋಪಿಗಳು ದುಬೈನಲ್ಲಿ ಕಚೇರಿ ಸ್ಥಾಪಿಸಿ ಅಂತರ ರಾಷ್ಟ್ರೀಯ ಮಟ್ಟದಲ್ಲೂ ವಂಚನೆ ಜಾಲವನ್ನು ವಿಸ್ತರಿಸಿರುವ ಮಾಹಿತಿ ಲಭ್ಯ ಆಗಿದೆ. ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತವಾಗಿ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವ ಶಂಕೆ ವ್ಯಕ್ತ ಆಗಿದ್ದು, ಪ್ರಕರಣದ ಸುತ್ತಲೂ ತನಿಖೆ ಗಂಭೀರವಾಗಿ ಮುಂದುವರೆದಿದೆ.
ಲಾಭದ ಭರವಸೆ ನೀಡುವ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಾಗಿದ್ದು, ಯಾವುದೇ ಸಂಸ್ಥೆಯಲ್ಲಿ ಹಣ ಹೂಡುವ ಮೊದಲು ವಿಶ್ವಾಸಾರ್ಹತೆ ಪರಿಶೀಲಿಸುವುದು ಅಗತ್ಯ ಆಗಿದೆ. ಜನರು ದೂರಿನ ಆಧಾರದ ಅಡಿಯಲ್ಲಿ ಸಿಸಿಬಿ ಹಾಗೂ ಕ್ರೈಂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮಾಡಿದ್ದಾರೆ.





