ಮಂಗಳೂರು: ಇಲ್ಲಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿಯಲ್ಲಿ ಹೈಟೆಕ್ ಮಾದರಿಯ ಮ್ಯಾಮೊಗ್ರಾಫಿ ಸೌಲಭ್ಯಗಳು ಸೇರಿದಂತೆ ಡಿಜಿಟಲ್ ಎಕ್ಸ್ ರೇ, ಅಲ್ಟ್ರಾಸೌಂಡ್, ಡಾಪ್ಲರ್, ಫೀಟಲ್ ಮೆಡಿಸಿನ್ ಮತ್ತು ಇಂಟರ್‌ವೆನ್ಶನಲ್ ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ 128 ಸ್ಲೈಸ್ ಸಿಟಿ ಸ್ಕ್ಯಾನರ್ ಹಾಗೂ ಇತರ ಯಂತ್ರಗಳನ್ನು ಆರಂಭಿಸಲಾಗಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಹೇಳಿದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ 128 ಸ್ಲೈಸ್ ಸಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಮ್ಯಾಮೊಗ್ರಾಫಿ ಯಂತ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರ ವೇಗವಾಗಿ ಹಾಗೂ ಆಧುನಿಕವಾಗಿ ಸಾಕಷ್ಟು ಹೈಟೆಕ್ ಆಗುತ್ತಿದೆ. ಮೊದಲು ಇದ್ದಂತಹ ದಿನಗಳು ಈಗ ಇಲ್ಲ, ತಂತ್ರಜ್ಞಾನ ಸಾಕಷ್ಟು ವೇಗ ಪಡೆದುಕೊಂಡಿದೆ. ಅದರಲ್ಲೂ ವೈದ್ಯಕೀಯ ಕ್ಷೇತ್ರ ಪ್ರತಿ ದಿನವೂ ಹೊಸ ತುಡಿಗಳ ಜತೆಗೆ ದಾಪುಗಾಲು ಹಾಕುತ್ತಿದೆ. ರೋಗ ಇಂತಹದ್ದೇ ಎಂದು ನಿಖರವಾಗಿ ಪತ್ತೆ ಹಚ್ಚುವಲ್ಲಿ ಯಂತ್ರಗಳು ವೈದ್ಯ ಸಮೂಹಕ್ಕೆ ಹತ್ತಿರ ಆಗಿವೆ ಎಂದರು.
ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿದರೆ, ಬಹುತೇಕ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗುತ್ತಾರೆ. ರೋಗಿಗಳು ತಪಾಸಣೆಗೆ ಬರುವಾಗಲೇ ಸಾಕಷ್ಟು ವಿಳಂಬ ಮಾಡಿ ಬರುವುದರಿಂದ ಸಾಕಷ್ಟು ಪ್ರಮಾಣದ ರೋಗಿಗಳಿಗೆ ಕಾಯಿಲೆ ಗುಣಮುಖ ಆಗುವುದು ಕಷ್ಟ. ಸ್ತನ ಕ್ಯಾನ್ಸರ್ ಪ್ರಕರಣಗಳು ಈಚೆಗೆ ಹೆಚ್ಚುತ್ತಿವೆ, 35 ವರ್ಷ ವಯಸ್ಸು ಮೇಲ್ಪಟ್ಟ ಮಹಿಳೆಯರು ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಆಸ್ಪತ್ರೆಯ ರೆಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ರೈ, ನವೀಕೃತ ರೆಡಿಯೊಲಜಿ ವಿಭಾಗವು ಹೈ -ಎಂಡ್ ಇಮೇಜಿಂಗ್ 1.5ಟಿ ಎಂಆರ್‌ಐ, 128 ಸ್ಲೈಸ್ ಸಿಟಿ ಸ್ಕ್ಯಾನರ್, ಅತ್ಯಾಧುನಿಕ ಮ್ಯಾಮೊಗ್ರಾಫಿ, ಡಿಜಿಟಲ್ ಎಕ್ಸ್ ರೇ, ಅಲ್ಟ್ರಾಸೌಂಡ್, ಡಾಪ್ಲರ್, ಫೀಟಲ್ ಮೆಡಿಸಿನ್ ಮತ್ತು ಇಂಟರ್‌ವೆನ್ಶನಲ್ ರೆಡಿಯೊಲಾಜಿ ಸೌಲಭ್ಯಗಳನ್ನು ಆಸ್ಪತ್ರೆಯ ವಿಭಾಗವು ಹೊಂದಿದೆ ಎಂದರು.
ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಅವರು ಮಾತನಾಡಿ, ಕೆಎಂಸಿ ಆಸ್ಪತ್ರೆಯಲ್ಲಿ ರೆಡಿಯೊ ಡಯಾಗ್ನೊಸ್ಟಿಕ್ ವಿಭಾಗವು ನಿರಂತರ ಸ್ಕ್ಯಾನಿಂಗ್, ಒಪಿಡಿ, ಸಂಜೆ ಒಪಿಡಿ, ತುರ್ತು ಚಿಕಿತ್ಸೆಯ ಸೇವೆ ನೀಡುತ್ತದೆ. ರೋಗಿಯ ಆರೈಕೆಯೇ ನಮ್ಮ ಮೊದಲ ಧ್ಯೇಯ ಆಗಿದೆ ಎಂದರು.
ಡಾ.ಉಣ್ಣಿಕೃಷ್ಣನ್ ಬಿ, ಡಾ. ದಿಲೀಪ್ ನಾಯಕ್, ಡಾ. ಆನಂದ್ ವೇಣು ಗೋಪಾಲ್, ಡಾ. ಚಕ್ರಪಾಣಿ, ಡಾ, ದೀಪಕ್ ಮಡಿ ಸೇರಿದಂತೆ ವಿವಿಧ ವಿಭಾಗದ ವೈದ್ಯರು ಇದ್ದರು.





