ಮಂಗಳೂರು: ಜಿಎಸ್‌ಬಿ ಸಮಾಜದ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನಾ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆ ಆಗಿ ಚೈತನ್ಯದಾಯಿ ಆಗಲಿದೆ ವೇದಮೂರ್ತಿ ಎಂ. ವಿಠಲ್ ಭಟ್ ಅವರು ಹೇಳಿದರು.
ಮಂಗಳೂರಿನಲ್ಲಿ ಜರುಗಿದ ವಯೋವಂದನಾ ಆತಿಥ್ಯ ಗೃಹದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಯೋಜನೆಯ ಸಮಗ್ರ ವಿವರಗಳನ್ನು ತಿಳಿಸಿ ಮಾತನಾಡಿ, ನಿವಾಸಿಗಳಿಗೆ ಊಟೋಪಚಾರ, ವಸತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯದ ಜತೆಗೆ ಜೀವನೋತ್ಸಾಹವನ್ನು ಹೆಚ್ಚಿಸುವ ನಿರಂತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.
ಉದ್ಭವ ಡಿಸೈನ್ ಸ್ಟುಡಿಯೊ ಮಣಿಪಾಲದ ಸಿವಿಲ್ ಎಂಜಿನಿಯರ್ ಕುಂದಾಪುರದ ಸಚಿತ್ ಪೈ ಅವರು ವಾಸ್ತು ವಿನ್ಯಾಸ ಮತ್ತು ಕಟ್ಟಡ ನಿರ್ಮಾಣ ಸಲಹೆಗಾರರಾಗಿದ್ದು, ಪ್ರತಿ ಮಹಡಿಯಲ್ಲಿ 24 ಕೊಠಡಿ ಗಳಂತೆ ಒಟ್ಟು 72 ಕೊಠಡಿಗಳ 144 ಮಂದಿ ಹಿರಿಯರಿಗೆ ವಾಸಿಸಲು ಅನುಕೂಲ ಆಗುವ 56 ಸಾವಿರ ಚದರ ಅಡಿಯ ಕಟ್ಟಡದ ವಾಸ್ತು ವಿನ್ಯಾಸ ಮತ್ತು ಸೌಲಭ್ಯಗಳ ವಿವರವನ್ನು ಸಭೆಗೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಹಾಗೂ ವಯೋವಂದನಾ ಆತಿಥ್ಯ ಗೃಹ ಯೋಜನೆ ರೂವಾರಿಗಳಾದ ಆರ್ ವಿವೇಕಾನಂದ ಶೆಣೈ ಅವರು, 14 ವರ್ಷಗಳಿಂದ ಕುಟುಂಬ ಚೈತನ್ಯ ನಿಧಿ, ವಿದ್ಯಾ ಪೋಷಕ ನಿಧಿ, ಪ್ರತಿಭಾ ಪುರಸ್ಕಾರ, ಆರೋಗ್ಯ ಚೈತನ್ಯ ನಿಧಿ, ಜಿಎಸ್‌ಬಿ ಗೃಹ ನಿರ್ಮಾಣ ಯೋಜನೆ, ಉಚಿತ ಗುಂಪು ಆರೋಗ್ಯ ವಿಮೆ ಯೋಜನೆ ಮೂಲಕ ಉಡುಪಿ ಜಿಲ್ಲೆಯಿಂದ ಪ್ರಾರಂಭಿಸಿ ದಕ್ಷಿಣ ಕನ್ನಡ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗೆ ವಿಸ್ತರಿಸಲಾಗಿದೆ ಎಂದರು.
ವಯೋವಂದನಾ ಆತಿಥ್ಯ ಗೃಹ ಯೋಜನೆ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಪ್ರಮುಖವಾಗಿ ಸಮಾಜದ ಮಕ್ಕಳಿಲ್ಲದ ಹಿರಿಯರಿಗೆ ಉಚಿತ ವಾಸ್ತವ್ಯ ಕಲ್ಪಿಸುವ ಸದುದ್ದೇಶದಿಂದ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಮಕ್ಕಳು ವಿದೇಶದಲ್ಲಿದ್ದು ಒಂಟಿತನ ಕಾಡುವ ದಂಪತಿಗಳಿಗೆ ಕೂಡಾ ನಿಗದಿತ ಶುಲ್ಕದೊಂದಿಗೆ ಅವಕಾಶ ನೀಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನದ ಅಧ್ಯಕ್ಷ ಸಿಎ ಎಸ್. ಎಸ್. ನಾಯಕ ಅವರು, ತಮ್ಮ ತಾಯಿಯ ಜನ್ಮದಿನ ಸಂಕಲ್ಪಿಸಿದಂತೆ ಒಂದು ಕೊಠಡಿ ದೇಣಿಗೆಗೆ 8 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು.
ಉಡುಪಿ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ಅವರು ಮಾತನಾಡಿ, ವೇದಿಕೆಯ ಸಮಾಜಮುಖಿ ಯೋಜನೆಗಳಿಗೆ ಸಮಾಜದ ಎಲ್ಲ ವರ್ಗಗಳಿಂದಲೂ ದೇಣಿಗೆಗಳು ಹರಿದು ಬರುತ್ತಿದ್ದು, ಅತಿ ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣಗೊಂಡು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಲಿ ಎಂದರು.
ವೇದಿಕೆಯಲ್ಲಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ಗಣೇಶ್ ಕಾಮತ್, ಕಿರಣ ಪೈ, ಕುವೈಟ್ ಜಿಎಸ್‌ಬಿ ಸಮಾಜದ ಪ್ರಮುಖರಾದ ಮಂಜೇಶ್ವರ ಮೋಹನ್ ದಾಸ್ ಕಾಮತ್, ಮಂಗಳೂರಿನ ಸಮಾಜ ಸೇವಕಿ ಪುಷ್ಪಾ ಪ್ರಭು, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಂಚಾಲಕ ಮೂಡಬಿದ್ರೆ ವಿಜಯಕುಮಾರ್ ಶೆಣೈ ಬೆಂಗಳೂರು ಇದ್ದರು.
ವಯೋವಂದನಾ ಯೋಜನೆಯ ಮಂಗಳೂರು ವಲಯ ಸಂಚಾಲಕ ರಘುನಾಥ ಪ್ರಭು ಅವರು ಸ್ವಾಗತಿಸಿ, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಹ ಸಂಚಾಲಕ ಸುಬ್ರಹ್ಮಣ್ಯ ಪ್ರಭು ಅವರು ವಂದಿಸಿದರು.





