ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 1,77,450 ಮ್ಯುಟೇಷನ್ ಗಳನ್ನು ತಂತ್ರಾಶದಲ್ಲಿ ದಾಖಲಿಸಲಾಗಿದ್ದು, ಭೂ ದಾಖಲೆಗಳಲ್ಲಿ ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಯಕ್ಕೆ ಅನುಗುಣವಾಗಿ ನವೀಕರಣ ಖಚಿತಪಡಿಸಿಕೊಳ್ಳಲು ಭೂಮಿ ಮತ್ತು ಕಂದಾಯ ನ್ಯಾಯಾಲಯಗಳ ಪ್ರಕರಣ ನಿರ್ವಹಣಾ ವ್ಯವಸ್ಥೆ, ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಸರ್ಕಾರವು ಜಾರಿಗೆ ತಂದಿದ್ದು, ಫೆ. 24 ರಂದು ಜಾರಿಗೆ ತಂದ ಸ್ವಯಂ ಚಾಲಿತ ಮ್ಯುಟೇಷನ್ ತಂತ್ರಾಂಶದ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ 900 ಕ್ಕೂ ಅಧಿಕ ಮ್ಯುಟೇಷನ್ಗಳು ಸ್ವಯಂ ಚಾಲಿತವಾಗಿ ಅನುಮೋದನೆಗೊಂಡಿದ್ದು, ಈ ನೂತನ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ತಿಳಿಸಿದ್ದಾರೆ.
ಈ ಹಿಂದೆ ಮ್ಯುಟೇಷನ್ಗಳಿಗೆ ಸಂಬಂಧಪಟ್ಟಂತೆ ಎಲ್ಲ 7 ದಿನಗಳ ಹಾಗೂ 15 ದಿನಗಳ ಅವಧಿ ಹೊಂದಿರುವ ಈ ನೋಟಿಸ್ ಅವಧಿ ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಸಲ್ಲಿಸಿರುವ ಮ್ಯುಟೇಶನ್ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ಸ್ವಯಂಚಾಲಿತ ಮ್ಯುಟೇಷನ್ ತಂತ್ರಾಂಶಕ್ಕೆ ಚಾಲನೆ ನೀಡಿದ್ದು, 7 ದಿನಗಳ ನವೀಕರಣವನ್ನು ನೋಂದಾಯಿತ ಮ್ಯುಟೇಷನ್
ಅಂದರೆ ಕ್ರಯ, ವಿಭಾಗ, ದಾನ ಇತ್ಯಾದಿ ಮ್ಯುಟೇಶನಗಳು ಹಾಗೂ 15 ದಿನಗಳ ನೋಂದಾಯಿತವಲ್ಲದ ಪೌತಿ ಮ್ಯುಟೇಶನ್ಗಳ ನೋಟಿಸ್ ಅವಧಿಯು ಮುಕ್ತಾಯದ ನಂತರ ತಂತ್ರಾಂಶದ ಮೂಲಕ ನೋಟೀಸ್ ಅಥವಾ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ವಯಂಚಾಲಿತವಾಗಿ ಮ್ಯುಟೇಷನ್ ಪೂರ್ಣಗೊಂಡ ನಂತರ ಸಂಬಂಧಪಟ್ಟವರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. 7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರಿಗೆ (ಸರ್ಕಾರಿ ಆಕ್ಷೇಪ) ಮತ್ತು ಸಾರ್ವಜನಿಕರಿಗೆ ಲಾಗಿನ್ ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ಸ್ಥಳದಿಂದ ಆಕ್ಷೇಪಣೆಯನ್ನು ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಆಕ್ಷೇಪಣೆ ಸಲ್ಲಿಸಿದ್ದಲ್ಲಿ ಸದರಿ ಮುಟೇಶನ್ನ್ನು ಪೂರ್ಣಗೊಳಿಸದೆ, ಖಅಅಒಖ ತಂತ್ರಾಂಶದ ತಹಶೀಲ್ದಾರರ ನ್ಯಾಯಾಲಯಕ್ಕೆ ಸದರಿ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಪಹಣಿಗಳಿಗೆ ಆಧಾರ ಜೋಡಣೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಪಹಣಿಯಲ್ಲಿ ಏನಾದರೂ ಬದಲಾವಣೆಯಾದಲ್ಲಿ ಮೊಬೈಲ್ನಲ್ಲಿ ಎಸ್ಎಂಎಸ್ ಬರುವುದರಿಂದ ಅಮಾಯಕರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ ಎಂದು ತಿಳಿಸಿದ್ದಾರೆ.
ಸಬ್ರಿಜಿಸ್ಟ್ರಾರ್ ಕಚೇರಿಯಿಂದ ದಸ್ತಾವೇಜು ನೋಂದಣಿಯಾದ ತಕ್ಷಣ, ಭೂಮಿ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಮ್ಯುಟೇಶನ್ ಪ್ರಕ್ರಿಯೆ ಆರಂಭವಾಗಲಿದ್ದು, ಇದರಿಂದಾಗಿ ಸಾರ್ವಜನಿಕರು ಕಂದಾಯ ಅಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪುತ್ತದೆ ಹಾಗೂ ಮ್ಯುಟೇಶನ್ ಪ್ರಕ್ರಿಯೆಯಲ್ಲಿ ಅನಗತ್ಯವಾದ ವಿಳಂಬ ಕಡಿಮೆಯಾಗುವುದರ ಜೊತೆಗೆ ಮತ್ತು ಭ್ರಷ್ಠಾಚಾರಕ್ಕೆ ಕಡಿವಾಣ ಬೀಳುತ್ತದೆ. ಈ ಹೊಸ ವ್ಯವಸ್ಥೆಯಿಂದಾಗಿ ಆಸ್ತಿ ಖರೀದಿದಾರರು ಮತ್ತು ರೈತರಿಗೆ ಆರ್ಟಿಸಿ ಅಥವಾ ಆಸ್ತಿ ದಾಖಲೆಗಳಲ್ಲಿನ ಹೆಸರನ್ನು ತ್ವರಿತವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿದ್ದು, ಬ್ಯಾಂಕ್ ಸಾಲ, ಬೆಳೆ ವಿಮೆ ಮತ್ತು ಸರ್ಕಾರದ ಸಬ್ಸಿಡಿಗಳನ್ನು ಸುಲಭವಾಗಿ ಪಡೆಯಲು ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯಲ್ಲಿನ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಪಾರದರ್ಶಕತೆಯನ್ನು ಹೊಂದಿದ್ದು, ಪ್ರತಿ ಹಂತದ ಮಾಹಿತಿಯು ಅರ್ಜಿದಾರರ ಮೊಬೈಲ್ಗೆ ಎಸ್ಎಂಎಸ್ ಮತ್ತು ಇ-ಮೇಲ್ ಮೂಲಕ ತಲುಪುವುದರಿಂದ ರೈತರು ಅಥವಾ ಆಸ್ತಿ ಮಾಲೀಕರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ಇದ್ದಲ್ಲಿಯೇ ಆನ್ಲೈನ್ ಮೂಲಕ ಪಹಣಿ ಅಥವಾ ಖಾತಾ ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಕೂಡಾ ಕಲ್ಪಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 1,77,450 ಮ್ಯುಟೇಶನ್ ಗಳನ್ನು ತಂತ್ರಾಶದಲ್ಲಿ ದಾಖಲಿಸಲಾಗಿದ್ದು, ಸ್ವಯಂಚಾಲಿತ ಮ್ಯುಟೇಶನ್ ಪ್ರಕ್ರಿಯೆ ಆರಂಭಗೊಂಡ ನಂತರದಲ್ಲಿ 7 ಕೆಲಸದ ದಿನಗಳಲ್ಲಿ ದಾಖಲಾದ 465 ಮತ್ತು 15 ಕೆಲಸದ ದಿನಗಳಲ್ಲಿ ದಾಖಲಾದ 547 ಪ್ರಕರಣಗಳು ಸ್ವಯಂಚಾಲಿತವಾಗಿ ಇತ್ಯರ್ಥಗೊಂಡಿವೆ. ಸ್ವಯಂಚಾಲಿತ ಮ್ಯುಟೇಶನ್ ಪ್ರಕ್ರಿಯೆಯಲ್ಲಿ, ಪಹಣಿಯಲ್ಲಿ ಏನಾದರೂ ಬದಲಾವಣೆಯಾದಲ್ಲಿ ಮೊಬೈಲ್ಗೆ ಎಸ್ಎಂಎಸ್ ಬರುವುದರಿಂದ ಅಮಾಯಕರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಈವರೆಗೂ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳದೇ ಇದ್ದಲ್ಲಿ
ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.





