ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ , ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನು ಒಳಗೊಂಡು ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರ ಹಾಗೂ ಕಾಯಂ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವರಿಕೆ ಆಗಿದ್ದು, ಅವರೇ ಸ್ಥಳ ಪರಿಶೀಲನೆಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ. ಶೀಘ್ರವೇ ಅವರು ಮಂಗಳೂರಿಗೆ ಭೇಟಿ ನೀಡುವ ದಿನವು ನಿಗದಿ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳೀಸಿದರು.
ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸಲು ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಮುಖ್ಯ ನ್ಯಾಯಾಧೀಶರು ಪರಿಶೀಲನೆ ಮಾಡಲಿದ್ದಾರೆ. ಹೈಕೋರ್ಟ್ ಪೀಠಕ್ಕೆ ಅಗತ್ಯ ಆಗಿ ಕೋರ್ಟ್ ಹಾಲ್, ದಾಖಲೆ ಪತ್ರ ಸಂಗ್ರಹಿಸಲು ಜಾಗದ ಅಗತ್ಯ ಇದೆ. ಇದಕ್ಕಾಗಿ 5.5 ಎಕರೆ ಜಾಗದಲ್ಲಿ ಇರುವ ಹಳೆ ಜಿಲ್ಲಾಧಿಕಾರಿ ಕಚೇರಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮೀಸಲಿಡುವಂತೆ ಸರಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ. ಇದಲ್ಲದೆ ಈಗಾಗಲೇ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹ ಮುಡಿಪಿಗೆ ಸ್ಥಳಾಂತರಗೊಂಡ ಬಳಿಕ ಈ ಜಾಗ ಲಭ್ಯವಾಗಲಿದೆ ಎಂದರು.
ಈ ಕಾರ್ಯಕ್ಕೆ ಇನ್ನೂ ಎರಡು ವರ್ಷಗಳು ಕಾಲ ಬೇಕಾಗಬಹುದಾದ ಕಾರಣ ಸದ್ಯ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಪೀಠ ಸ್ಥಾಪಿಸಬಹುದಾಗಿದೆ. ಸ್ಥಳ ಪರಿಶೀಲನೆ ನಡೆಸಲಿರುವ ಹೈಕೋರ್ಟ್ ಮುಖ್ಯ ನ್ಯಾಯಧೀಶರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ಪ್ರಕ್ರಿಯೆ ಹೈಕೋರ್ಟ್ ಪೀಠಕ್ಕಾಗಿ ಜನಸಾಮಾನ್ಯರು ಸೇರಿದಂತೆ ವಕೀಲರ ಸಂಘ, ಕಾನೂನು ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ತಂಡದ ಹೋರಾಟದ ಫಲ ಆಗಿದೆ. ಹೈಕೋರ್ಟ್ ಪೀಠ ಸ್ಥಾಪನೆ ಅಗತ್ಯದ ಕುರಿತಂತೆ ಪತ್ರ ಚಳವಳಿ, ಇಮೇಲ್ ಚಳವಳಿಯ ಮೂಲಕ ಹೈಕೋರ್ಟ್ ನ್ಯಾಯಾಧೀಶರ ಗಮನ ಸೆಳೆಯಲಾಗಿತ್ತು. ಅವರಿಗೆ ಮಂಗಳೂರಿನಲ್ಲಿ ಸಂಚಾರ ಹೈಕೋರ್ಟ್ ಪೀಠದ ಅಗತ್ಯದ ಮನವರಿಕೆ ಆಗಿದೆ. ಈ ಮೂಲಕ ಮಂಗಳೂರಿನಲ್ಲೂ ಹುಬ್ಬಳ್ಳಿ- ಧಾರವಾಡ, ಕಲಬುರಗಿ ರೀತಿಯಲ್ಲಿ ಸಂಚಾರಿ ಪೀಠ ಸ್ಥಾಪನೆ ಆಗುವ ಭರವಸೆ ವ್ಯಕ್ತವಾಗಿದೆ ಎಂದರು.
ದ.ಕ. ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ್, ಸರಕಾರಿ ವಕೀಲ ಎಂ.ಪಿ. ನೊರೊನ್ಹಾ, ಭಾಸ್ಕರ್ ಇದ್ದರು.





