ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಯದ ಆಶ್ರಯದಲ್ಲಿ ಆಳ್ವಾಸ್ ಸಂಸ್ಥೆಯ ಕೃಷಿ ಸಿರಿ ಆವರಣದಲ್ಲಿ ಜರುಗಿದ ಮಂಗಳೂರು ವಿವಿ ಅಂತರ್ ಕಾಲೇಜು ವೇಟ್ ಲಿಫ್ಟಿಂಗ್ ಸ್ಪರ್ಧಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಹಿಳಾ ಮತ್ತು ಪುರುಷರ ಎರಡು ವಿಭಾಗದಲ್ಲಿ ತಂಡ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಮಹಿಳಾ ತಂಡವು ಒಟ್ಟು 3 ಚಿನ್ನ, 3 ಬೆಳ್ಳಿ, 2 ಕಂಚು ಪದಕ ಪಡೆದು ಒಟ್ಟು 41 ಅಂಕ ಪಡೆದು ಈ ಸಾಧನೆ ಮೆರೆದಿದ್ದಾರೆ. ಪುರುಷರ ವಿಭಾಗವು 4 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಗಳಿಸಿ ಒಟ್ಟು 47 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಈ ಸಾಧನೆಯೊಂದಿಗೆ ಆಳ್ವಾಸ್ ಮಹಿಳಾ ತಂಡ ಸತತ 25 ವರ್ಷಗಳಿಂದ ಹಾಗೂ ಪುರುಷರ ತಂಡ ಸತತ 7 ವರ್ಷಗಳಿಂದ ಸಮಗ್ರ ತಂಡ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಪ್ರೊ. ರಿಚರ್ಡ ರೆಬೆಲ್ಲೋ ರೋಲಿಂಗ್ ಟ್ರೋಫಿ ಮತ್ತು ಶಿರ್ವ ಬ್ಲೋಸಂ ಮಾನ್ಶನ್ ಸೆಲೆಸ್ಟಿಯನ್ ಡಿಸೋಜ ಟ್ರೋಫಿ ಕೂಡ ಮುಡಿಗೇರಿಸಿಕೊಂಡಿದೆ.
110 ಕೆಜಿ ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕಾಲೇಜಿನ ತೇಜಸ್ ಬೆಸ್ಟ್ ಲಿಫ್ಟರ್ ವೈಯಕ್ತಿಕ ಪ್ರಶಸ್ತಿ ಪಡೆದರು. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.





