ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಟೆಕ್ನಾಲಜಿ ಸೆಂಟರ್ ಆಶ್ರಯದಲ್ಲಿ ಹೊರತರಲಾದ ನವೋದ್ಯಮಿಗಳ ಪ್ರೇರಣಾದಾಯಕ ಕಥೆಗಳ ವಿಡಿಯೊ ಪಾಡ್‌ಕಾಸ್ಟ ಸರಣಿ ಸಿಲಿಕಾನ್ ಬೀಚ್ ಸ್ಟೋರೀಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕರಾವಳಿ ಕರ್ನಾಟಕವು ವ್ಯಾಪಾರ, ಶಿಕ್ಷಣ ಮತ್ತು ಉದ್ಯಮಶೀಲತೆ ಸಮೃದ್ಧ ಪರಂಪರೆ ಹೊಂದಿದೆ. ಈ ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ರೂಪುಗೊಂಡಿರುವ ವಿಶಿಷ್ಟ ಉಪಕ್ರಮವೇ ಸಿಲಿಕಾನ್ ಬೀಚ್ ಸ್ಟೋರೀಸ್. ಇದು ಉದಯೋನ್ಮುಖ ಉದ್ಯಮಿಗಳ ಯಶೋಗಾಥೆಗಳನ್ನು ವಿಡಿಯೊ ಮತ್ತು ಪಾಡ್‌ಕಾಸ್ಟ್ ರೂಪದಲ್ಲಿ ದಾಖಲಿಸಿ ಹಂಚಿಕೊಳ್ಳುವ ಸೃಜನಾತ್ಮಕ ವೇದಿಕೆ ಆಗಿದೆ. ಈ ಯೋಜನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಉದ್ಯಮಶೀಲತಾ ಅಭಿವೃದ್ಧಿ ಘಟಕದ ಮಾರ್ಗದರ್ಶನದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ನಿರ್ವಹಿಸುತ್ತಿದ್ದಾರೆ. ದೊಡ್ಡ ಕನಸುಗಳನ್ನು ಸಾಧಿಸಲು ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಅಗತ್ಯ. ಯಾವ ಕೋರ್ಸ್ ಓದುತ್ತೀರಿ ಅಥವಾ ಎಲ್ಲಿ ಓದುತ್ತೀರಿ ಎಂಬುದಕ್ಕಿಂತ ನಿಮ್ಮ ಮನೋಭಾವ, ಶ್ರಮ ಮತ್ತು ಸ್ಥಿರತೆ ಮುಖ್ಯ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಉದ್ಯಮಶೀಲತಾ ಅಭಿವೃದ್ಧಿ ಘಟಕದ ಮುಖ್ಯಸ್ಥ ವೇಣುರಾವ್ ದೇವ್ ಮಾತನಾಡಿ, ಪ್ರತಿಯೊಬ್ಬರಿಗೂ ಕನಸುಗಳಿದ್ದರೂ, ಅವನ್ನು ವಾಸ್ತವಕ್ಕೆ ತರುವವರು ಕೆಲವರೇ. ಪರಿಪೂರ್ಣತೆಗೆ ಕಾಯದೆ ಕೆಲಸವನ್ನು ಪ್ರಾರಂಭಿಸುವುದೇ ಯಶಸ್ಸಿನ ಕೀಲಿಕೈ ಎಂದರು.
ಆಪಾವಾಣಿ ಎನ್ವಿರಾನ್‌ಮೆಂಟಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಡಾ. ವಿಷ್ಣುಶರ್ಮ ಆಟಿಕುಕ್ಕೆ ತಮ್ಮ ಉದ್ಯಮಶೀಲಾ ಅನುಭವವನ್ನು ಹಂಚಿಕೊಂಡರು. ಸಂಸ್ಥೆಯನ್ನು ಸ್ಥಾಪಿಸುವ ವೇಳೆ ಹಲವು ಸವಾಲುಗಳನ್ನು ಎದುರಿಸಿದ್ದರೂ, ಉತ್ಸಾಹ, ತಾಳ್ಮೆ ಮತ್ತು ಕಠಿಣ ಪರಿಶ್ರಮದಿಂದ ಬೆಳೆಯುತ್ತಿರುವುದಾಗಿ ಹೇಳಿದರು. ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸ್ಟ್ರೇಕಾನ್ ಎಲ್‌ಎಲ್‌ಪಿ ಸಂಸ್ಥಾಪಕ ಆಕಾಶ್ ಶೆಟ್ಟಿ ಮಾತನಾಡಿ, ನಮ್ಮ ಪ್ರಯಾಣ ಕನಸುಗಳಲ್ಲೇ ನಿಂತಿಲ್ಲ; ಅದು ಕಠಿಣ ಪರಿಶ್ರಮದಿಂದ ನಿರ್ಮಿತವಾದ ಸಾಧನೆ. ಆರಂಭದಲ್ಲಿ ಅನಿಶ್ಚಿತತೆ ಇದ್ದರೂ, ನಿರಂತರ ಪ್ರಯತ್ನ ಮತ್ತು ಕಲಿಕೆಯ ಮನೋಭಾವದಿಂದ ಯಶಸ್ಸು ಸಾಧಿಸಬಹುದು ಎಂದರು.
ಸ್ಟ್ರೇಕಾನ್ ಎಲ್‌ಎಲ್‌ಪಿ ಸಂಸ್ಥಾಪಕ ರಾಮಪ್ರಸಾದ್ ಘಾಟೆ, ಆಪಾವಾಣಿ ಸಂಸ್ಥಾಪಕ ಚಿನ್ಮಯ ದೇಲಂಪಾಡಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ರಾಮಾನಂದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ನೇಹ ಚಿತ್ರಕರ್ ಕಾರ್ಯಕ್ರಮ ನಿರೂಪಿಸಿ, ರೋಲ್ಮ ಸ್ವಾಗತಿಸಿ, ನಂದನ ವಂದಿಸಿದರು.





