ಮಂಗಳೂರು: ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಷನ್ ವತಿಯಿಂದ ನಿರ್ಮಿಸಲಾದ ಮನೆಗಳ ಹಸ್ತಾಂತರ ಕಾರ್ಯಕ್ರಮ ಸೇವಾ ಸಂಭ್ರಮ ಇದೇ 25 ರಂದು ಸಂಜೆ 6 ಗಂಟೆಗೆ ಬಂಟ್ವಾಳ ತಾಲೂಕಿನ ಪಂಬದಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯ ವತಿಯಿಂದ ನಿರ್ಮಿಸಲಾದ 14ನೇ ಮತ್ತು 15ನೇ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 8 ಗಂಟೆಯಿಂದ ಮ್ಯೂಸಿಕಲ್ ಸ್ಟಾರ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್, ಶಮೀರ್ ಮುಡಿಪು, ಸುಪ್ರೀಯಾ ರಾಮ್, ಮೈಮ್ ರಾಮ್‌ದಾಸ್ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಲ್ಲವ ಬ್ರಿಗೇಡ್ ತನ್ನ ಸಮಾಜಮುಖಿ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದು, ಕಡು ಬಡವರಿಗೆ ಈಗಾಗಲೇ 13 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದೆ. ಇದೀಗ ಮತ್ತಷ್ಟು ಎರಡು ಮನೆಗಳು ಸಿದ್ಧಗೊಂಡಿವೆ. ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ನಿಂತಿದ್ದ ಮನೆಗಳನ್ನು ಪೂರ್ಣಗೊಳಿಸುವ ಮೂಲಕ ಸಹಾಯ ಮಾಡುತ್ತಿರುವುದು ಸಂಸ್ಥೆಯ ವಿಶೇಷತೆ. ಇದರೊಂದಿಗೆ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ, ಕೋವಿಡ್ ಅವಧಿಯಲ್ಲಿ 4500 ಕ್ಕೂ ಅಧಿಕ ನೆರವು ಕಿಟ್‌ಗಳ ವಿತರಣೆ ಹಾಗೂ 700 ಕ್ಕೂ ಹೆಚ್ಚು ಯೂನಿಟ್ ರಕ್ತದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದೆ ಎಂದರು.
ಯುವ ನಾಯಕ ಸದಾನಂದ ಪೂಜಾರಿ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಈ ಸಂಘಟನೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಆಧಾರವಾಗಿಟ್ಟುಕೊಂಡು ನಿರಂತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಸಂಸ್ಥೆಗೆ 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಗಮನಾರ್ಹವಾಗಿದೆ.
ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ ಎಂದು ಯಶವಂತ ದೇರಾಜೆ ತಿಳಿಸಿದರು.
ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಸುಧಾಕರ್ ಕರ್ಕೇರ, ಅನ್ವೀತ್ ಕಟೀಲು, ಪ್ರಶಾಂತ್ ಮಂಗಳಾದೇವಿ ಹಾಗೂ ಬಿಲ್ಲವ ಬ್ರಿಗೇಡ್ ಕಾರ್ಯಧ್ಯಕ್ಷ ನಿಶಾನ್ ಪೂಜಾರಿ ಇದ್ದರು.





