ಎಸ್.ಎಸ್.ಎಲ್.ಸಿ. ಫಲಿತಾಂಶ ದ.ಕ ವಿಧ್ಯಾರ್ಥಿಗಳ ಸಾಧನೆ: ಜಿಲ್ಲಾ ಬಿಜೆಪಿ ಹರ್ಷ

ಬಿಜೆಪಿ

ಮಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ನಮ್ಮ ಜಿಲ್ಲೆಯ ಶೈಕ್ಷಣಿಕ ಬದ್ಧತೆಯ ಸ್ಪಷ್ಟ ಸಾಕ್ಷಿಯಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರತಿನಿಧಿಸುತ್ತಿರುವ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿರುವುದು ಅತ್ಯಂತ ಖೇದಕರ ವಿಚಾರ. ಕಳೆದ ಅರ್ಧ ಶತಮಾನದಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವೇ ಈ ಕ್ಷೇತ್ರವನ್ನು ಆಳುತ್ತಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ ಮಟ್ಟದ ಸುಧಾರಣೆ ಕೂಡ ತರಲಾಗದಿರುವುದು ಅವರ ಸಂಪೂರ್ಣ ವೈಫಲ್ಯವನ್ನು ಬಯಲಿಗೆಳೆಯುತ್ತದೆ ಎಂದರು.

ಸ್ವಂತ ಕ್ಷೇತ್ರದ ಈ ದುರವಸ್ಥೆಯನ್ನು ಮರೆಮಾಚಲು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ನಿರಂತರ ಟೀಕೆ ಮಾಡುವುದು ಹಾಗೂ ಇಲ್ಲಿನ ಆರ್.ಎಸ್.ಎಸ್ ಮತ್ತು ಹಿಂದೂ ಸಂಘಟನೆಗಳನ್ನು ಗುರಿಯಾಗಿಸುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಹಲವು ಸಂಘಟನೆಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿರುವಾಗ, ಅವುಗಳನ್ನು ನಿರಂತರವಾಗಿ ದೂಷಿಸುವುದು ಅಸಹ್ಯಕರವಾಗಿದೆ ಆಗಿದೆ ಎಂದರು.

ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಗಮನ ಹರಿಸುವ ಬದಲು, ಅನಗತ್ಯ ಮತ್ತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ನಮ್ಮ ಜಿಲ್ಲೆಯ ಅಸ್ಮಿತೆಗೆ ಧಕ್ಕೆಯುಂಟುಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಸಾಧನೆ ಶೂನ್ಯಕ್ಕೆ ಸಮವಾಗಿದ್ದರೂ, ಇತರ ಜಿಲ್ಲೆಗಳ ಬಗ್ಗೆ ಮಾತನಾಡುವುದು ಸಂಪೂರ್ಣ ಅಸಂಬದ್ಧ.
ಸಂಘದ ಶತಮಾನೋತ್ಸವ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಚರಿಸುವ ಸಂದರ್ಭದಲ್ಲೂ ಅದನ್ನು ತಡೆಯಲು ವಿಫಲ ಯತ್ನ ನಡೆಸುವುದು ಅವರ ಅಸಹಿಷ್ಣುತೆಯ ಪ್ರತೀಕವಾಗಿದೆ. ಇದರೊಂದಿಗೆ, ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಸಂಘ ಹಾಗೂ ಬಿಜೆಪಿ ಕುರಿತು ನೀಡಿರುವ ಮುಸಲ್ಮಾನ ಸಮುದಾಯವನ್ನು ಎತ್ತಿಕಟ್ಟುವ ಹೇಳಿಕೆಗಳು ಸಮಾಜದಲ್ಲಿ ವಿಷಬೀಜ ಬಿತ್ತುವಂತಿವೆ ಎಂಬುದು ಸ್ಪಷ್ಟ ಎಂದು ತಿಳಿಸಿದ್ದಾರೆ.

ಇಷ್ಟೊಂದು ವರ್ಷಗಳಿಂದ ಜನರಿಂದ ಆಯ್ಕೆಯಾಗುತ್ತಿದ್ದರೂ, ಆ ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡದೇ ಇರುವುದು ಅವರ ಆಡಳಿತದ ದುರಂತವಾಗಿದೆ. ಇದಕ್ಕಿಂತ ದೊಡ್ಡ ವೈಫಲ್ಯ ಮತ್ತೊಂದು ಇರಲು ಸಾಧ್ಯವಿಲ್ಲ. ಇನ್ನಾದರೂ ಆತ್ಮಪರಿಶೀಲನೆ ಮಾಡಿಕೊಂಡು, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವ ಜವಾಬ್ದಾರಿಯನ್ನು ಅರಿತುಕೊಳ್ಳಲಿ. ಜನರು ನೀಡಿದ ಅವಕಾಶಕ್ಕೆ ನ್ಯಾಯ ಒದಗಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಲು ಅವರಿಗೆ ಸದ್ಬುದ್ಧಿ ದೊರಕಲಿ ಎಂದರು.

 

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma