ಯಾದಗಿರಿ: ಸುರಪುರ ಸಮೀಪ ಭೀಕರ ರಸ್ತೆ ಅಪಘಾತ, 6 ಮಂದಿ ದುರಂತ ಸಾವು, ವಾಹನ ಬೆಂಕಿಗಾಹುತಿ

1 1

ಯಾದಗಿರಿ: ಸುರಪುರ ತಾಲೂಕಿನ ದೇವಾಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವು ಕಂಡಿದ್ದಾರೆ. ಯಾದಗಿರಿಯಿಂದ ರಾಯಚೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ವಿಆರ್ ಎಲ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಯೇ ಸಾವು ಕಂಡಿದ್ದಾರೆ. ಅಪಘಾತದ ಪರಿಣಾಮ ಎರಡು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳಕ್ಕೆ ದೌಡಾಯಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರು ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ನಿವಾಸಿಗಳು ಎಂದು ಗುರುತಿಸಲಾಗಿದೆ. ಅಮಾವಾಸ್ಯೆ ಹಿನ್ನೆಲೆ ತಿಂತನಿಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಸರ್ಕಾರಿ ನೌಕರ ಶರಣಪ್ಪ, ಪುರಸಭೆ ಸದಸ್ಯ ಮಲ್ಲಿಕಾರ್ಜುನ್, ಮೂವರು ಮಹಿಳೆಯರು ಹಾಗೂ 12 ವರ್ಷದ ಮಗು ಸೇರಿದೆ.

ಎರಡು ಜಿಲ್ಲೆಗಳಲ್ಲೂ ಶೋಕದ ವಾತಾವರಣ ನಿರ್ಮಾಣ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಅಪಘಾತದ ತೀವ್ರತೆ ಬಸ್‌ ಗೂ ಬೆಂಕಿ ವ್ಯಾಪಿಸಿದ್ದು, ಅಲ್ಲಿದ್ದ ಸ್ಥಳೀಯರು ತಕ್ಷಣವೇ ಕಾರಿನಲ್ಲಿದ್ದವರ ರಕ್ಷಣೆಗೆ ಬಂದಿದ್ದರು. ಕಾರಿನ ಜಖಂಗೊಂಡಿದ್ದ ಪರಿಣಾಮ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಬಳಿಕ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಕಾರಿನಲ್ಲಿ ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆದು ಅವರ ಗುರುತನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma