ಕಾರವಾರ: ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿ ಮಾಹಿತಿ ಕೋರಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಅಗತ್ಯ ಮಾಹಿತಿ ಒದಗಿಸುವುದು ಎಲ್ಲ ಇಲಾಖೆಗಳ ಮಾಹಿತಿ ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ ಆಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯ್ದೆ ಕುರಿತಂತೆ ಅಗಿಂದಾಗ್ಗೆ ಸುಪ್ರೀಂ, ಹಾಗೂ ರಾಜ್ಯ ಹೈಕೋರ್ಟ್ ಗಳು ನೀಡುವ ತೀರ್ಪುಗಳ ಕುರಿತಂತೆ ಮಾಹಿತಿ ಅಧಿಕಾರಿಗಳು ಅರಿವು ಹೊಂದಿರಬೇಕು, ಕಾಯಿದೆಯಲ್ಲಿನ ಎಲ್ಲಾ ಅಂಶಗಳ ಬಗ್ಗೆ ಸಮಗ್ರವಾಗಿ ಅರಿತುಕೊಂಡು ಸಾರ್ವಜನಿಕರಿಗೆ ಮಾಹಿತಿಗಳನ್ನು ಒದಗಿಸಬೇಕು. ಪ್ರಥಮ ಮೇಲ್ಮನವಿ ಮತ್ತು ಎರಡನೇ ಮೆಲ್ಮನವಿಗಳ ಸಲ್ಲಿಕೆಗೆ ಅವಕಾಶ ನೀಡದೇ ಅರ್ಜಿಗಳನ್ನು ವಿಲೇಗೊಳಿಸಬೇಕು. ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದ ಅಧಿಕಾರಿಗಳಿಗೆ ರೂ 25000 ಗಳವರೆಗೆ ದಂಡ ಮತ್ತು ಕರ್ತವ್ಯ ಲೋಪದ ಶಿಸ್ತು ದಂಡ ವಿಧಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಚಿಸುವ ಅಧಿಕಾರ ಆಯೋಗಕ್ಕಿದೆ ಎಂದರು.

ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಮಾಣಿ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿದಾರರು ಕೋರುವ ಮಾಹಿತಿಯನ್ನು ವಿವರವಾಗಿ ಪರಿಶೀಲಿಸಿ ಅಗತ್ಯ ಮಾಹಿತಿಯನ್ನು, ನಿಗಧಿತ ಶುಲ್ಕ ಪಡೆದು ನೀಡಬೇಕು. ಈ ಕಾಯಿದೆಯ ದುರ್ಬಳಕೆ ಕುರಿತು ಕೂಡಾ ಆಯೋಗಕ್ಕೆ ದೂರುಗಳು ಬಂದಿದ್ದು, ಆಯೋಗವು ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಆಯೋಗದಲ್ಲಿ 55,400 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಅವುಗಳಲ್ಲಿ 26,670 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಸ್ತುತ 28,730 ಬಾಕಿ ಇವೆ. ಉತ್ತರ ಕನ್ನಡ ಜಿಲ್ಲೆಗೆ ಸಂಬಂದಿಸಿದಂತೆ 524 ಅರ್ಜಿಗಳು ಬಾಕಿ ಇದ್ದು, ಜಿಲ್ಲೆಯು ರಾಜ್ಯದಲ್ಲಿ 17 ನೇ ಸ್ಥಾನದಲ್ಲಿ ಇದ್ದು, ಜಿಲ್ಲೆಯ ಅರ್ಜಿಗಳಲ್ಲಿ 164 ಅರ್ಜಿಗಳು ಆರ್.ಡಿ.ಪಿ.ಆರ್ ಮತ್ತು 110 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಉಳಿದದ್ದು ಇತರೆ ಇಲಾಖೆಗಳಿಗೆ ಸಂಬಂದಪಟ್ಟದ್ದಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ, ಅರಣ್ಯ, ಪೊಲೀಸ್, ಗ್ರಾಮೀಣಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳು ಸಲ್ಲಿಕೆ ಆಗುತ್ತಿದ್ದು, ಕಾಯ್ದೆ ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬಲಪಡಿಸಲು ಸಹಾಯವಾಗಲಿದ್ದು, ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅತ್ಯಂತ ಶೀಘ್ರದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗಲಿದ್ದು, ಪಾರದರ್ಶಕತೆ ತರಲು ಸಾಧ್ಯವಾಗಲಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಾಯಿದೆಯ ಕುರಿತಂತೆ ಸಂಪೂರ್ಣ ಅರಿವು ಹೊಂದಿರಬೇಕು ಎಂದರು.
ಮಾಹಿತಿ ಆಯುಕ್ತ ನಾರಾಯಣ ಚನ್ನಾಳ, ಜಿ.ಪಂ. ಸಿಇಒ ಡಾ.ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು.
ನಂತರ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂವಾದ ಚರ್ಚೆ ನಡೆಯಿತು.





