ಮಂಗಳೂರು: ಆಟಿಸಂ ಎಂದರೆ ಏನು? ಆಟಿಸಂ ಹೊಂದಿರುವ ಮಕ್ಕಳ ತರಬೇತಿ ಹೇಗೆ? ಅವರ ವರ್ತನೆಯ ಸಮಸ್ಯೆಗಳನ್ನು ಯಾವ ರೀತಿ ಪರಿವರ್ತಿಸಬಹುದು ಎಂಬ ವಿಚಾರಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಅಗತ್ಯವಾಗಿ ತಿಳಿದುಕೊಳ್ಳಬೇಕು. ಆಟಿಸಂ ಬಗ್ಗೆ ಅರಿವು ಅತೀ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಅವರು ಹೇಳಿದರು.
ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆ, ಮಂಗಳೂರು ಗ್ರಾಮಾಂತರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ವ್ಯವಸ್ಥೆ ಮಾಡಿದ ಒಂದು ದಿನದ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ಗ್ರಾಮಾಂತರ ಪ್ರದೇಶದ 57 ಮಂದಿ ಕಾರ್ಯಕರ್ತೆಯರು ಶಿಬಿರದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣೇಶಾ ಸೇವಾ ಟ್ರಸ್ಟಿ ಅಧ್ಯಕ್ಷ ಮಹಾಬಲ ಮಾರ್ಲ, ಟ್ರಸ್ಟಿ ಖಜಾಂಜಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರೊ. ರಾಧಾಕೃಷ್ಣ ನಿರ್ದೇಶಕ ಮೊಹಮ್ಮದ್ ಬಶೀರ್ ಇದ್ದರು.
ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಆಡಳಿತಾಧಿಕಾರಿ ಸುಮಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ಮೀನಾಕ್ಷಿ ಹಾಗೂ ವಿಶೇಷ ಶಿಕ್ಷಕಿ ಸೋಫಿಯಾ ಡಿಸೋಜಾ ಆಟಿಸಂ ಬಗ್ಗೆ ಮಾಹಿತಿ ನೀಡಿದರು.





