ಕಾರವಾರ: ಕೇಂದ್ರ ಸರ್ಕಾರವು ಜನಗಣತಿ 2027ರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದ್ದು, ಬುಧವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ತಮ್ಮ ಮೊಬೈಲ್ ಮೂಲಕ ತಮ್ಮ ಸ್ವಯಂ ಗಣತಿ ದಾಖಲಾತಿಯನ್ನು ಪೂರ್ಣಗೊಳಿಸುವ ಮೂಲಕ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಸ್ವಯಂ ಗಣತಿ ಮಾಡಿಕೊಳ್ಳಲು ಪ್ರೇರಣೆ ನೀಡಿದರು.
ನಮ್ಮ ಜನಗಣತಿ- ನಮ್ಮ ಅಭಿವೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ಕಾರ ಜನಗಣತಿ 2027 ನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸರ್ಕಾರ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದೆ. 2026 ರ ಏ.1 ರಿಂದ 15 ರವರೆಗೆ ಜಿಲ್ಲೆಯ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನೈನ್ ನಲ್ಲಿ ದಾಖಲಿಸಿಕೊಳ್ಳಬಹುದಾಗಿದ್ದು, ಈ ಪ್ರಕ್ರಿಯೆಯು ಅತ್ಯಂತ ಸರಳ ಮತ್ತು ಸುರಕ್ಷಿತವಾಗಿದೆ ಎಂದು ತಿಳಿಸಿದರು.
ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಮೂಲಕ ಸುಲಭವಾಗಿ 5 ರಿಂದ 10 ನಿಮಿಷಗಳಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಬಹುದಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಅರ್ಜಿಯ ಸಂಖ್ಯೆ ದೊರೆಯುವುದು. ಈ ಸಂಖ್ಯೆಯನ್ನು ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಿದಲ್ಲಿ, ಗಣತಿದಾರರು ಅತೀ ಕಡಿಮೆ ಸಮಯದಲ್ಲಿ ಗಣತಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾಧಿಕಾರಿಗಳು ತಮ್ಮ ಸ್ವಯಂ ಗಣತಿಯ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಹಂಚಿಕೊಂಡ ಕೂಡಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಲವು ಅಧಿಕಾರಿಗಳು ತಾವೂ ಕೂಡಾ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಸ್ವಯಂ ಗಣತಿ ಪೂರ್ಣಗೊಂಡ ತಮ್ಮ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರ ಮಾದರಿ ನಡೆಯನ್ನು ಅನುಸರಿಸಿದ್ದು ಮಾತ್ರವಲ್ಲದೇ ತಮ್ಮ ಅಧೀನ ಸಿಬ್ಬಂದಿಗೆ ಪ್ರೇರಣೆ ನೀಡಿದರು.
ಜನಗಣತಿ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವ ಮಹತ್ವದ ಕಾರ್ಯವಾಗಿದ್ದು, ಇದು ದತ್ತಾಂಶ ಆಧಾರಿತ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಆರೋಗ್ಯ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಮರ್ಪಕ ಸಂಪನ್ಮೂಲ ಹಂಚಿಕೆಗೆ ದಾರಿ ತೋರುತ್ತದೆ. ಜನಗಣತಿಯಲ್ಲಿ ನಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದ್ದು, ಇಂದು ನಾವು ನೀಡುವ ನಿಖರ ಮಾಹಿತಿಯು, ನಾಳೆಯ ಉತ್ತಮ ನೀತಿಗಳು ಮತ್ತು ಸೇವೆಗಳಿಗೆ ಆಧಾರವಾಗುತ್ತದೆ. ಜನಗಣತಿಯಿಂದ ಯಾರು ಬಿಟ್ಟು ಹೋಗದಂತೆ ಸರ್ಕಾರ ಮುತುವರ್ಜಿ ವಹಿಸಿದೆ. ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ಜಿಲ್ಲೆಯಲ್ಲಿ ಜನಗಣತಿ 2027 ಅನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಕೈ ಜೋಡಿಸೋಣ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಜಿಲ್ಲೆಯ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.





