ಮಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿಯೇ ಕಾಲಹರಣ ಮಾಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೇ ಸಿಎಂ ಕುರ್ಚಿ ಕಿತ್ತಾಟವೇ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಸಿಎಂ ಆಗುವುದಕ್ಕೆ ಸಜ್ಜಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಜತೆಗೆ ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಖರ್ಗೆ ಕೂಡ ಮುಖ್ಯಮಂತ್ರಿ ಆಗಲು ಸಿದ್ಧತೆ ನಡೆಸಿರುವುದು ಕಂಡು ಬಂದಿದೆ. ಇದರ ಮಧ್ಯೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೂ ಸರಿಯಾಗಿ ಯೋಜನೆ ಫಲ ಸಿಗುತ್ತಿಲ್ಲ ಎಂದರು.
ಮೂರು ವರ್ಷದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಅಧಿಕಾರಕ್ಕಾಗಿ ದಿನನಿತ್ಯ ಹೆದಲಿ ಯಾತ್ರೆ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಜನರಿಗೆ ಉಚಿತ ನಾಟಕದ ಪ್ರದರ್ಶನ ಸಿಗುತ್ತಿದೆ. ಗೃಹಲಕ್ಷ್ಮಿ ಹಣವನ್ನು ಮಹಿಳೆಯರಿಗೆ ಸಕಾಲಕ್ಕೆ ಪಾವತಿಸದೆ ಸತಾಯಿಸಲಾಗುತ್ತಿದೆ. ಉಚಿತ ವಿದ್ಯುತ್ ನೀಡುತ್ತೆವೆ ಎನ್ನುತ್ತಲೇ ವಿದ್ಯುತ್ ದರ ಹೆಚ್ಚಿಸಲಾಗಿದೆ ಎಂದರು.
ಸರ್ವರ್ ಸಮಸ್ಯೆ ಕಾರಣದಿಂದ ಕಂದಾಯ ಇಲಾಖೆ ಸ್ತಬ್ಧ ಆಗಿದೆ. ಮನೆ ತೆರಿಗೆ ಪಾವತಿಸಲು, ಜನನ-ಮರಣ ಪ್ರಮಾಣ ಪತ್ರ ಪಡೆಯಲೂ ಸರ್ವರ್ ಸಮಸ್ಯೆ ಉಂಟಾಗಿದೆ. ದ.ಕ. ಜಿಲ್ಲೆಯಲ್ಲಿ ಭೂಮಾಪಕರು 55 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, 15 ಸಾವಿರ ಅರ್ಜಿಗಳು ವಿಲೇವಾರಿ ಆಗದೆ ಬಾಕಿಯಾಗಿವೆ. 11 ಇ-ನಕ್ಷೆ ಮಾಡಲು ಸಾಧ್ಯ ವಾಗುತ್ತಿಲ್ಲ. ಭೂಮಾಪಕ ಮುಷ್ಕರದಿಂದ ಸಮಸ್ಯೆ ಗಂಭೀರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಅವರು ಸಾರ್ವಜನಿಕ ರಂಗದ 50 ನೇ ವರ್ಷದ ಅಭಿಮಾನೋತ್ಸವ ಕಾರ್ಯಕ್ರಮವು ಇದೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. ಜಿಲ್ಲೆಯಿಂದ 5,000 ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೆಮಾನಂದ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಜೋಗಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ, ಸಂಜಯ ಪ್ರಭು, ವಸಂತ ಪೂಜಾರಿ ಇದ್ದರು.





