ಮಂಗಳೂರು: ಮಹಾನಗರ ಪಾಲಿಕೆ 2025-26 ರ ಸಾಲಿನಲ್ಲಿ 149. 68 ಕೋಟಿ ರೂಪಾಯಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ ಮಾಡಿದೆ ಎಂದು ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2024- 25 ರಲ್ಲಿ 137 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಮಾಡಲಾಗಿತ್ತು. 2023-24 ರಲ್ಲಿ 117 ಕೋಟಿ ರೂಪಾಯಿ ಆಸಕ್ತಿ ತೆರಿಗೆ ಸಂಗ್ರಹ ಮಾಡಲಾಗಿತ್ತು. ಆಸ್ತಿ ತೆರಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಮುಂದಿನ ವರ್ಷ ಇನ್ನಷ್ಟು ಹೆಚ್ಚಳ ಮಾಡುವ ಮೂಲಕ ಪಾಲಿಕೆ ವ್ಯಾಪ್ತಿ ಅಭಿವೃದ್ಧಿಗೊಳಿಸುವ ಸಂಕಲ್ಪ ಮಾಡಲಾಗುತ್ತದೆ ಎಂದರು.
ಪಾಲಿಕೆಯ 60 ವಾರ್ಡ್‌ಗಳಲ್ಲಿ 1,75,724 ವಸತಿ ಆಸ್ತಿ ಹೊಂದಿದ್ದು, 44,074 ವಾಣಿಜ್ಯ ಆಸ್ತಿ, 1,175 ಕೈಗಾರಿಕಾ ಆಸ್ತಿ, 1283 ವಸತಿ ರಹಿತ-ವಾಣಿಜ್ಯ ರಹಿತ ಆಸ್ತಿ ಸೇರಿ ಒಟ್ಟು 2, 22, 256 ಆಸ್ತಿಗಳನ್ನು ಹೊಂದಿದ್ದೇವೆ. ಈ ಅಸ್ತಿಗಳ ಮೂಲಕ ತೆರಿಗೆ ಪಾವತಿ ಮಾಡಿಕೊಂಡು 2026 ರ ಮಾರ್ಚ್ 31 ರವರೆಗೆ 149.68 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದರು.
ವ್ಯವಸ್ಥಿತ ಅಸ್ತಿ ತೆರಿಗೆ ಸಂಗ್ರಹ ಮಾಡುವ ಉದ್ದೇಶದಿಂದ ಪಾಲಿಕೆಯ ಅತ್ತಾವರ, ಪದವು, ಹಂಪನಕಟ್ಟೆ ವಾರ್ಡ್ ಗಳಲ್ಲಿ ಪೈಲಟ್ ಆಗಿ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಅದರಂತೆ ಕಂದಾಯ ಅಧಿಕಾರಿಗಳು, ಕಂದಾಯ ಸಹಾಯಕರು, ಬಿಲ್ ಕಲೆಕಲೆಕ್ಟರ್ಸ್, ಇನ್ನಿತರ ಸಿಬಂದಿ ಈ ಮೂರು ವಾರ್ಡ್‌ಗಳ ಶೇ 50 ರಷ್ಟು ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಇದರಿಂದಾಗಿ ಈ ವಾರ್ಡ್‌ಗಳಲ್ಲಿ 55.33 ಲಕ್ಷ ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹ ಆಗಿದೆ. ಶೇ 100ರಷ್ಟು ಸರ್ವೆ ಆದಲ್ಲಿ 3 ಕೋಟಿ ರೂಪಾಯಿವರೆಗೆ ಹೆಚ್ಚುವರಿ ತೆರಿಗೆ ಸಂಗ್ರಹ ಆಗಬಹುದು. ಪೈಲಟ್ ಯೋಜನೆಯನ್ನು ಮುಂದೆ ಪಾಲಿಕೆಯ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಲಾಗಿದೆ ಎಂದರು.
ಸಾರ್ವಜನಿಕರು ಮುಂದಿನ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಅಂತ್ಯದೊಳಗೆ ಪಾವತಿ ಮಾಡಿದರೇ ಶೇ 5 ರಿಯಾಯಿತಿ ನೀಡಲಾಗುವುದು. ಪ್ರತಿ ವರ್ಷ ಆಸ್ತಿ ತೆರಿಗೆಯನ್ನು ಮುಂಗಡವಾಗಿ ಪಾವತಿಸಿದರೆ ಶೇ 5 ರ ರಿಯಾಯ್ತಿ ನೀಡಲಾಗುತ್ತಿದೆ. ಪಾಲಿಕೆ ವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪಾಲಿಕೆಯ ಉಪ ಆಯುಕ್ತೆ ಅಕ್ಷತಾ ಇದ್ದರು.
ನೀರಿನ ಅಭಾವ ಇಲ್ಲ: ಕಮಿಷನರ್
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿವ ನೀರಿನ ಅಭಾವ ಇಲ್ಲ. ತುಂಬೆಯಲ್ಲಿ ಶೇಖರಣೆಗೊಂಡ ನೀರಿನಿಂದ ನಗರಕ್ಕೆ 30 ದಿನಗಳಿಗೆ ನೀರುಣಿಸಬಹುದು. ಮತ್ತೆ ಅಭಾವ ಕಂಡುಬಂದರೆ ಹರೇಕಳ ಡ್ಯಾಂನಿಂದ ನೀರ ಅನ್ನು ಪಂಪಿಂಗ್ ಮೂಲಕ ಮೇಲೆತ್ತುವ ಕಾರ್ಯ ನಡೆಯಲಿದೆ. ಇದರಿಂದ 110 ದಿನಗಳವರೆಗೆ ಈಗಿರುವ ನೀರನ್ನು ಪಾಲಿಕೆ ವ್ಯಾಪ್ತಿಯ ಜನರಿಗೆ ಪೂರೈಕೆ ಮಾಡಲು ಸಾಧ್ಯ ಆಗಲಿದೆ ಎಂದು ಕಮಿಷನರ್ ರವಿಚಂದ್ರ ನಾಯಕ್ ತಿಳಿಸಿದರು.





