ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಯುಜಿಸಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಬಿಡುಗಡೆ ಆಗಿದೆ. ಇದೇ ಏ 23 ಮತ್ತು 24 ರಂದು ನಡೆವ ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಅಧಿಕೃತ ಲಿಂಕ್ ಅನ್ನು ಬಿಡುಗಡೆ ಮಾಡಿದೆ.
ಲಿಂಕ್ ಬಿಡುಗಡೆಯ ಬೆನ್ನಲ್ಲೆ ವಿದ್ಯಾರ್ಥಿಗಳಿಗೆ ಗಂಭೀರ ಎಚ್ಚರಿಕೆ ಕೂಡ ನೀಡಲಾಗಿದೆ. ಕೆಲ ಕಿಡಿಗೇಡಿಗಳು ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿ, ಪ್ರವೇಶ ಪತ್ರ ಡೌನ್ಲೋಡ್ ಎಂಬ ನೆಪದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದು, ಅಧಿಕೃತ ವೆಬ್ಸೈಟ್ KEA Common Online Application 2026 https://share.google/r1PgwSVSfhrFcNrOu
ಮೂಲಕ ಮಾತ್ರವೇ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೆಲ ಫೇಕ್ ಲಿಂಕ್ಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಈ ಲಿಂಕ್ಗಳ ಮೂಲಕ ಯಾವುದೇ ಪ್ರವೇಶ ಪತ್ರ ಡೌನ್ಲೋಡ್ ಸಾಧ್ಯವಿಲ್ಲ. ಬದಲಾಗಿ, ಸಂವೇದನಾಶೀಲ ಮಾಹಿತಿ ಸಂಗ್ರಹಿಸುವ ಅಪಾಯ ಇದೆ.
ವಿದ್ಯಾರ್ಥಿಗಳು ಕೆಳಗಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಕೆಇಎ ಅಧಿಕೃತ ವೆಬ್ಸೈಟ್ನಲ್ಲೇ ಲಾಗಿನ್ ಆಗಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಸಿಗುವ ಅನಪೇಕ್ಷಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.





