ಮಂಗಳೂರು: ಇಲ್ಲಿನ ಸರಕಾರಿ ಸ್ವಾಯತ್ತ ಸರಕಾರಿ ಪಾಲಿಟೆಕ್ನಿಕ್ ವಿವಿಧ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಕೆಪಿಟಿ- ಸಿಎಟಿ ಮೂಲಕ ಪ್ರವೇಶಾತಿ ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಹರೀಶ್ ಶೆಟ್ಟಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪಾಸ್ ಆದವರು ವಿವಿಧ ಡಿಪ್ಲೊಮಾ ಕೋರ್ಸ್‌ಗಳ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು, ಏ.27 ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೇ 11 ರಂದು ಅರ್ಜಿ ಸಲ್ಲಿಸಲು ಕೊನೆ ದಿನ ಆಗಿರುತ್ತದೆ. 8 ಕೋರ್ಸ್‌ಗಳಿಗೆ 520 ಸೀಟ್‌ಗಳು ಲಭ್ಯ ಇವೆ. ಆಟೋಮೊಬೈಲ್, ಸಿವಿಲ್ , ಮೆಕಾನಿಕಲ್ , ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ , ಕೆವಿಕಲ್, ಪಾಲಿಮರ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ , ಕಂಪ್ಯೂಟರ್ ಸಾಯಿನ್ಸ್ ಮತ್ತು ಎಂಜಿನಿಯರಿಂಗ್ ಸೇರಿದಂತೆ ಒಟ್ಟು 8 ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರ್ಪಡೆಗೆ ಅವಕಾಶವಿದೆ. ಪ್ರತಿಯೊಂದು ಕೋರ್ಸ್‌ಗಳಿಗೆ ತಲಾ 60 ರಂತೆ 460 ಮಂದಿಗೆ ಸೇರ್ಪಡೆಗೆ ಅವಕಾಶವಿದೆ. ಮೆಕಾನಿಕಲ್ ಎಂಜಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಸಂಜೆಯ ಅವಧಿ ಕೋರ್ಸ್‌ಗೆ ತಲಾ 30 ರಂತೆ 60 ಮಂದಿಗೆ ಸೇರ್ಪಡೆಗೆ ಅವಕಾಶ ಇದೆ ಎಂದು ತಿಳಿಸಿದರು.
ಸಂಸ್ಥೆಯ ಡೀನ್ ರವೀಂದ್ರ ಮಹಾಬಲೇಶ್ವರ ಖೇಣಿ ಅವರು ಮಾತನಾಡಿ, ಕೆಪಿಟಿ ಸಂಸ್ಥೆಯಲ್ಲಿ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಯೋಜನೆ ಅಡಿ ನೇರವಾಗಿ ಬಿಇ ಅಥವಾ ಬಿ.ಟೆಕ್ ಎಂಜಿನಿಯರಿಂಗ್ 2ನೇ ವರ್ಷಕ್ಕೆ ಪ್ರವೇಶ ಪಡೆಯಬಹುದು. ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಕೆಪಿಟಿ-ಸಿಎಟಿ ಪರೀಕ್ಷೆ ಬರೆಯುವುದು ಕಡ್ಡಾಯ ಆಗಿದೆ. ಮೇ 18 ಮತ್ತು 20 ರಂದು ಎರಡು ಹಂತಗಳಲ್ಲಿ ಕೆಪಿಟಿ-ಸಿಎಟಿ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಿದಾಗ ದೊರೆ ಯುವ ಸ್ವೀಕೃತಿ ಪತ್ರವೇ ಕೆಪಿಟಿ- ಸಿಎಟಿ ಪ್ರವೇಶ ಪತ್ರ ಆಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 75 ಅಂಕಗಳು ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ ಶೇ 25 ಅಂಕ ಸೇರಿದಂತೆ ಒಟ್ಟು ಸಂಯೋಜಿತ ಮೆರಿಟ್ ಸ್ಕೋರ್ ( ಒಟ್ಟು 100 ಅಂಕಗಳಲ್ಲಿ) ಆಧಾರದ ಮೇಲೆ ಸಂಯೋಜಿತ ಮೆರಿಟ್ ಪಟ್ಟಿ ತಯಾರಿಸಲಾಗುವುದು ಎಂದರು.
ಪ್ರವೇಶ ಉಸ್ತುವಾರಿ ಡಾ. ಸತೀಶ್ ಕೆ.ಎಂ ಅವರು ಮಾತನಾಡಿ, ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್ ಸಂಸ್ಥೆಗೆ ನವದೆಹಲಿಯ ಎಐಸಿಟಿಇ ಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಥಮ ಸ್ವಾಯತ್ತ ಸರಕಾರಿ ಸಂಸ್ಥೆಯಾಗಿದೆ. ಈ ಸ್ವಾಯತ್ತ ಸ್ಥಾನಮಾನವು ಸಂಸ್ಥೆಯ ಗುಣಮಟ್ಟ , ನಾವಿನ್ಯತೆ ಮತ್ತು ಪಾರದರ್ಶಕ ಆಡಳಿತಕ್ಕೆ ಸಂದ ರಾಷ್ಟ್ರೀಯ ಮನ್ನಣೆ ಆಗಿದೆ. ಈ ಸ್ವಾಯತ್ತತೆಯಿಂದಾಗಿ ಸಂಸ್ಥೆಯು ಶೈಕ್ಷಣಿಕ , ಆಡಳಿತಾತ್ಮಕ ಮತ್ತು ಪರೀಕ್ಷಾ ವ್ಯವಸ್ಥೆಗಳನ್ನು ಸ್ವತಂತ್ರವಾಗಿ ನಿರ್ವಹಿಸಿಕೊಳ್ಳುವ ಅಧಿಕಾರವನ್ನು ಹೊಂದಿದೆ. ಸ್ವಾಯತ್ತ ಸಂಸ್ಥೆಯಾದ ಕಾರಣ ತ್ವರಿತ ಮತ್ತು ಪಾರದರ್ಶಕ ಮೌಲ್ಯಮಾಪನದಿಂದ ಪರೀಕ್ಷಾ ಫಲಿತಾಂಶವನ್ನು ಅತ್ಯಂತ ಶೀಘ್ರವಾಗಿ ಪ್ರಕಟಿಸಲು ಸಾಧ್ಯವಾಗುತ್ತಿದೆ ಎಂದರು.
ಡೀನ್ ನಾರಾಯಣ ಸ್ವಾಮಿ ಆರ್, ರಿಜಿಸ್ಟ್ರಾರ್ ವಿನೋದ ಕುಮಾರಿ, ಪರೀಕ್ಷಾ ನಿಯಂತ್ರಕರಾದ ಪಿ. ಡಿ. ತಲ್ವಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಹರೀಶ ಸಿ.ಪಿ ಇದ್ದರು.





