ಮಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿ ಆಗದಂತೆ ತಡೆದ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜನಾಕ್ರೋಶ ಪ್ರತಿಭಟನಾ ಪಾದಯಾತ್ರೆ ಸೋಮವಾರ ನಗರದ ಬಿಜೆಪಿ ಕಚೇರಿಯಿಂದ ಮಹಾನಗರ ಪಾಲಿಕೆ ಕಚೇರಿಯವರೆಗೆ ನಡೆಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಅವರು ಮಾತನಾಡಿ, ತೊಟ್ಟಿಲು ತೂಗುವ ಕೈಗಳು ದೇಶವನ್ನು ಸಹ ಆಳಬಲ್ಲವು ಎಂಬುದನ್ನು ಪ್ರಧಾನಿ ಮೋದಿ ಅವರು ಸರಿಯಾಗಿ ಅರ್ಥೈಸಿದ್ದಾರೆ. ಹಾಗಾಗಿಯೇ ಕೇಂದ್ರ ಸರಕಾರ ದೇಶದ ಎಲ್ಲ ಕ್ಷೇತ್ರಗಳಲ್ಲಿ ನಾರಿಶಕ್ತಿಗೆ ಆದ್ಯತೆ ನೀಡಿ, ರಾಜಕೀಯವಾಗಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಂಸತ್ತಿನಲ್ಲಿ ನಾರಿಶಕ್ತಿ ವಂದನಾ ಮಸೂದೆ ಮಂಡಿಸಿತ್ತು. ಆದರೆ, ಈ ಮಸೂದೆಗೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಮೂಲಕ ನಾರಿ ಶಕ್ತಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು 5ನೇ ಬಾರಿಗೆ ಮಹಿಳಾ ರಾಜಕೀಯ ಮೀಸಲಾತಿ ಅನುಮೋದನೆಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಸದಸ್ಯ ಸ್ಥಾನಗಳಿಂದ 42 ಕ್ಕೆ ಏರಿಕೆ ಆಗುವುದರೊಂದಿಗೆ ಮಹಿಳಾ ಪ್ರಾತಿನಿಧ್ಯ ಅಧಿಕಗೊಳ್ಳಲಿತ್ತು. ಆದರೆ, ಈ ಮಸೂದೆಗೆ ಒಪ್ಪಿಗೆ ಸಿಗದ ಕಾರಣ ಮಹಿಳೆಯರ ಕಡೆಗಣನೆ ಆದಂತೆ ಆಗಿದ್ದು, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಈ ಕಾರಣಕ್ಕೆ ಸಂಭ್ರಮಿಸಿದ್ದ ಅನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದರು.
ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್ ಮಾತನಾಡಿ, ದೇಶಕ್ಕೆ ಅಗತ್ಯ ಇರುವ ಪ್ರತೀ ಸುಧಾರಣೆಗಳಿಗೂ ಅಡ್ಡಿಪಡಿಸುವುದೇ ಕಾಂಗ್ರೆಸ್ಸಿನ ಹುಟ್ಟುಗುಣ, ಡಿಜಿಟಲ್ ಪೇಮೆಂಟ್, ತ್ರಿವಳಿ ತಲಾಕ್ ನಿಷೇಧ, ಸಮಾನ ನಾಗರಿಕ ಸಂಹಿತೆ, ಅಕ್ರಮ ವಲಸಿಗರನ್ನು ಹೊರಹಾಕುವುದು, ಹೀಗೆ ಎಲ್ಲ ಸಂದರ್ಭದಲ್ಲಿಯೂ ಕಾಂಗ್ರೆಸ್ಸಿನ ಮುಖವಾಡ ಕಳಚಿ ಬಿದ್ದಿದೆ. ಈಗ ಶೇ 33 ಮಹಿಳಾ ಮೀಸಲಾತಿಗೆ ಅಡ್ಡಗಾಲು ಹಾಕಿ ಮತ್ತೊಮ್ಮೆ ತಾವು ಎಂದಿಗೂ ಮಹಿಳಾ ವಿರೋಧಿಗಳು ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಶಾಸಕ ಡಿ. ವೇದವ್ಯಾಸ ಕಾಮತ್ ಇದ್ದರು.





