ಸಿರಸಿ: ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅನ್ನುತ್ತೀರ್ಣ ಆಗಿದ್ದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಗುರುವಾರ ಪ್ರಕಟಗೊಂಡ ಅಧಿಕೃತ ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ನಮೂದಾಗಿದ್ದ ಕಾರಣ ಲೀಸಾ ಫೇಲ್ ಎಂದು ತೋರಿಸಲಾಗಿತ್ತು. ಆದರೆ, ಶುಕ್ರವಾರ ಬಂದ ಫಲಿತಾಂಶದಲ್ಲಿ ಲೀಸಾ ಶಾಲೆಗೆ ಟಾಪರ್ ಎಂದು ಹೇಳಲಾಗುತ್ತಿದೆ.
ಸಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್, ಎಲ್ಲ ಪರೀಕ್ಷೆಗೆ ಹಾಜರಾಗಿದ್ದರೂ, ಪರೀಕ್ಷಾ ಪ್ರಾಧಿಕಾರದ ತಪ್ಪಿನಿಂದ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ನಮೂದಾಗಿತ್ತು. ಪರಿಣಾಮ ಶೇ 84.16 ಅಂಕ ಗಳಿಸಿದ್ದರೂ ಕೂಡ ಆಕೆ ಫಲಿತಾಂಶ ಫೇಲ್ ಎಂದು ಪ್ರಕಟ ಆಗಿತ್ತು.
ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣ ಆದ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಲಾಗಿದ್ದು, ಈಗ ಲಭ್ಯ ಆಗಿರುವ ಮಾಹಿತಿಯ ಪ್ರಕಾರ ಅದೇ ವಿಷಯದಲ್ಲಿ ಲೀಸಾಗೆ 97 ಅಂಕಗಳು ಬಂದಿದ್ದು, ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿರಸಿ ಡಿಡಿಪಿಐ ದಯಾನಂದ ನಾಯಕ್ ಅವರು, ಪ್ರಸ್ತುತ ಹರಿದಾಡುತ್ತಿರುವ ಫಲಿತಾಂಶ ಅಧಿಕೃತ ಪ್ರತಿಯಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿ ಪೇಪರ್ ಮಿಸ್ ಆಗಿರುವುದು ನಿಜ ಆಗಿದ್ದು, ಅದರ ಪರಿಶೀಲನೆ ಇನ್ನೂ ಮುಂದುವರೆದಿದೆ. ಅಂತಿಮ ಅಧಿಕೃತ ಫಲಿತಾಂಶ ಪ್ರಕಟಿಸಲು ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು ಎಂದು ತಿಳಿಸಿದ್ದಾರೆ.





