ಧಾರವಾಡ: ಇಲ್ಲಿನ ಕಬ್ಬೆನೂರ ಗ್ರಾಮದ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘವು ಈ ವರ್ಷದ ಲಾಭಾಂಶವನ್ನು ಬಡ ಹೆಣ್ಣುಮಗಳ ಮದುವೆಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರ ಮೂಲಕ ರೂಪಾಯಿ 20 ಸಾವಿರ ನಗದು, ಸೀರೆ, ಹಣ್ಣು ಕಾಯಿ, ತಾಂಬೂಲ ನೀಡಿದರು.
ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಪ್ರತಿನಿಧಿಗಳಾದ ರಾಜೇಶ್ವರಿ ಮಂಜುನಾಥ ಪವಾಡಿ ಹಾಗೂ ಶಿವಲೀಲಾ ಕಮಾರ ಅವರು ಕುಂದಗೋಳ ತಾಲೂಕಿನ ಗುಡೆನಕಟ್ಟಿ ಗ್ರಾಮದ ಪ್ರತಿದಿನ ಕೂಲಿ ಮಾಡುವ ಬಡ ಕುಟುಂಬದ ಲಕ್ಷ್ಮವ್ವ ಸಿದ್ದುನವರ ಹಾಗೂ ಮದುವೆ ಆಗುವ ಅವರ ಮಗಳು ಭೂಮಿಕಾ ಸಿದ್ದುನವರ ಅವರಿಗೆ ತಮ್ಮ ಸಂಘದ ಲಾಭಾಂಶದಲ್ಲಿನ ಮೊತ್ತವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರ ಹಸ್ತಾಂತರ ಮಾಡಲಾಯಿತು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಅಕ್ಕಾ ಕೆಪ್ಪೆ ಕಾರ್ಯ ಇತರರಿಗೆ ಮಾದರಿ ಆಗಿದೆ. ತಮ್ಮ ಲಾಭದ ಹಣವನ್ನು ಬಡ ಕುಟುಂಬದ ಮದುವೆಗೆ ನೀಡಿ, ಇತರರಿಗೆ ಸ್ಫೂರ್ತಿ ಆಗಿದ್ದಾರೆ ಎಂದರು.
ಗುಡೆನಕಟ್ಟಿ ಗ್ರಾಮದ ಸಿದ್ದುನವರ ಕುಟುಂಬದ ಯಜಮಾನ ಬಸವರಾಜ ಅವರು ನಿಧನರಾಗಿದ್ದರು. ಮಗಳ ಮದುವೆ ಹೊಣೆ ತಾಯಿ ಲಕ್ಷ್ಮವ್ವಳ ಮೇಲಿದೆ. ಸಂಘಕ್ಕೆ ಸಾಲ ಕೇಳಲು ಬಂದವರಿಗೆ ಧನಸಹಾಯ ಮಾಡಿದ ರಾಜೇಶ್ವರಿ ಹಾಗೂ ಶಿವಲೀಲಾ ಅವರನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು.





