ರಾಯಚೂರು: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋಣ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಮತ್ತು ಚಿಕ್ಕಮಗಳೂರು ಭಾಗಗಳಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ತೆರಳುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದ ಬೊಲೆರೊ ಮತ್ತು ಬೀದರ್ನಿಂದ ತುಮಕೂರಿಗೆ ಸಾಗುತ್ತಿದ್ದ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿ ಈ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೊಲೆರೊ ಸಂಪೂರ್ಣ ನಜ್ಜುಗುಜ್ಜಾಗಿ, ವಾಹನದಲ್ಲಿದ್ದ ಹಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಮತ್ತು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಐದು ಮಂದಿ ಮಹಿಳೆಯರು, ಇಬ್ಬರು ಪುರುಷರು ಹಾಗೂ ಮಗು ಇದೆ.
ಅಪಘಾತದಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳಿಗೆ ಕರ್ನೂಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಮಂತ್ರಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50,000 ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ಘೋಷಿಸಲಾಗಿದೆ. ಜೊತೆಗೆ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.





