ಎನ್ ಐಟಿಕೆ ಮಾಜಿ ಕುಲಸಚಿವ ರವೀಂದ್ರನಾಥ ಸೇವೆಯಿಂದ ವಜಾ; ಎನ್ ಐಟಿಕೆ ಪ್ರಕಟಣೆ

Spread the love

ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ– ಕರ್ನಾಟಕ (ಎನ್‌ಐಟಿಕೆ)ದ ಮಾಜಿ ಕುಲಸಚಿವರನ್ನು ಆಡಳಿತಾತ್ಮಕ ಅಕ್ರಮದ ಆರೋಪದ ಮೇಲೆ ಆಡಳಿತ ಮಂಡಳಿ ಸೇವೆಯಿಂದ ವಜಾಗೊಳಿಸಿದೆ ಎಂದು ಎನ್‌ಐಟಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್‌ಐಟಿಕೆ ಆಡಳಿತ ಮಂಡಳಿಯ ಮಾಜಿ ಕುಲಸಚಿವ ರವೀಂದ್ರನಾಥ್ ಕೆ. ಅವರು ಸೇವೆಯಿಂದ ವಜಾಗೊಂಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದ ಮೇರೆಗೆ ಹಾಗೂ ಆಡಳಿತ ಮಂಡಳಿ ನಿರ್ಣಯದಂತೆ 2025 ರ ಸೆ. 12 ರಿಂದ ಅವರು ಸೇವೆಯಿಂದ ಅಮಾನತುಗೊಂಡಿದ್ದರು. ಬಳಿಕ ಅವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖೆಯ ತನಿಖೆ ಆರಂಭ ಆಗಿತ್ತು. 1964 ರ ಕೇಂದ್ರ ನಾಗರಿಕ ಸೇವಾ (ನಡಾವಳಿಕೆ) ನಿಯಮಗಳ ಉಲ್ಲಂಘನೆ, ಕೆಲ ಪ್ರಕ್ರಿಯೆಗಳನ್ನು ಅಕ್ರಮವಾಗಿ ನಡೆಸಿರುವುದು ಹಾಗೂ ವೃತ್ತಿಪರವಲ್ಲದ ಅಸಭ್ಯ ನಡವಳಿಕೆ ಆರೋಪಗಳು ಅವರ ಮೇಲಿದ್ದು, ಅವುಗಳ ಕುರಿತು ತನಿಖೆ ನಡೆಸಲಾಗಿತ್ತು.

ರವೀಂದ್ರನಾಥ್‌ ಕೆ. ಅವರ ಮೇಲಿನ ಆರೋಪಗಳು ಸಾಬೀತು ಆಗಿರುವುದರಿಂದ ಅವರನ್ನು ಸೇವೆಯಿಂದ ವಜಾ ಮಾಡಲು ಆಡಳಿತ ಮಂಡಳಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ. 2007 ರ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಕಾಯ್ದೆ (ಎನ್‌ಐಟಿಎಸ್‌ಇಆರ್‌) ಮತ್ತು ಅದರ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿ ಕುಲಸಚಿವ ಹುದ್ದೆಯಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರೆಯಲು ಅವಕಾಶ ಇಲ್ಲ. ಐದು ವರ್ಷಕ್ಕಿಂತಲೂ ಹೆಚ್ಚು ಸಮಯ ಕುಲಸಚಿವ ಹುದ್ದೆಯಲ್ಲಿದ್ದ ಕಾರಣ ಅವರ ಅವಧಿಯನ್ನು ಸೇವೆಯಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನವೇ ಮುಕ್ತಾಯಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಸ್ಥೆಯು ಯಾವುದೇ ರೀತಿಯ ಅಕ್ರಮ ಅಥವಾ ಅನೈತಿಕ ನಡವಳಿಕೆಯನ್ನು ಸಹಿಸುವುದಿಲ್ಲ. ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎನ್‌ಐಟಿಕೆ ಬದ್ಧತೆಯನ್ನು ಈ ಕ್ರಮವು ಎತ್ತಿ ಹಿಡಿದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *