ಮಂಗಳೂರು: ಕುತ್ಲುರು ಸರಕಾರಿ ಶಾಲೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ಪತ್ರಕರ್ತರ ಸಂಘದ ಜತೆಗೆ ಕೈಜೋಡಿಸಲಿದೆ. ಸಂಸ್ಥೆ ವತಿಯಿಂದ ಶಾಲೆಗೆ ಕುಡಿವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ಸಮವಸ್ತ್ರ ಹಾಗೂ ನೋಟ್ ಬುಕ್ ನೀಡಲಾಗುವುದು ಎಂದು ಬಿ ಎ ಎಸ್ ಎಫ್ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಅವರು ಹೇಳಿದರು.
ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ಕುತ್ಲುರು ಸರಕಾರಿ ಶಾಲೆ ವತಿಯಿಂದ ಶಾಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಎಂ ಆರ್ ಪಿ ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಹಾಗೂ ಬಿ ಎ ಎಸ್ ಎಫ್ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂ ಆರ್ ಪಿ ಎಲ್ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಅವರು ಮಾತನಾಡಿ, ತಮ್ಮ ಸಂಸ್ಥೆ ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಸಿ ಎಸ್ ಆರ್ ನಿಧಿ ಮೂಲಕ ನೀಡಲಾಗುತ್ತದೆ. ಕುತ್ಲುರು ಶಾಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ನೆರವಿನ ಭರವಸೆ ನೀಡಿದರು.

ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದೆ.ಮೂಲಭೂತ ಸೌಕರ್ಯ ಹೆಚ್ಚಾಗಿದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕೂಡಾ ಹೆಚ್ಚಳ ವಾಗಿದೆ ಎಂದು ಕುತ್ಲುರು ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕನಕವರ್ಮಾ ಜೈನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಈ ಶಾಲೆಗೆ ಎಲ್ ಕೆ ಜಿ, ಯು ಕೆ ಜಿ ಆರಂಭಿಸಲು ಎರಡು ತರಗತಿ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದಾರೆ. ಶಾಲೆಯ ಮನವಿ ಮೇರೆಗೆ ಪ್ರಿಂಟರ್, ಬೆಂಚ್, ಡೆಸ್ಕ್, 3 ಕಂಪ್ಯೂಟರ್ಸ್ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಬಿ ಎ ಎಸ್ ಎಫ್ ಮಾನವ ಸಂಪನ್ಮೂಲ ವಿಭಾಗದ ಪ್ರಬಂಧಕ ಸಂತೋಷ ಪೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ ಎನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟಾ,ಕುತ್ಲುರು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಸದಸ್ಯರಾದ ಗಾಯತ್ರಿ, ಹರ್ಷಿತ್ ಇದ್ದರು.





