Breaking News

ಕಾರಿಂಜ ಸುತ್ತಮುತ್ತ ಗಣಿಗಾರಿಕೆ ನಡೆಸದಂತೆ ಸರ್ಕಾರ ಆದೇಶ

 

ಬಂಟ್ವಾಳ: ಕಾರಿಂಜ ಕಾರಿಂಜೇಶ್ವರ ದೇವಸ್ಥಾನದ 2 ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಕಾಯ್ದಿರಿಸಿ ಎಲ್ಲ ರೀತಿಯ ಗಣಿಗಾರಿಕೆ ಮತ್ತು ಕಲ್ಲುಪುಡಿ ಚಟುವಟಿಕೆ ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಾರಿಂಜ ದೇವಸ್ಥಾನದ ಸಂರಕ್ಷಣೆಗಾಗಿ ಪರಿಸರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಲು ಮತ್ತು ಪಾವಿತ್ರ್ಯ ಉಳಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆಯು ಮನವಿ, ಹೋರಾಟ ನಡೆಸಿತ್ತು. ಅದಕ್ಕೆ ಪೂರಕವಾಗಿ ಶಾಸಕ ರಾಜೇಶ್‌ ನಾಯಕ್ ಉಳಿಪ್ಪಾಡಿಗುತ್ತು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ಕುಮಾರ್‌ ಅವರನ್ನು ಕ್ಷೇತ್ರಕ್ಕೆ ಕರೆಸಿ ಗಣಿಗಾರಿಕೆ ನಿಷೇಧ ಪ್ರದೇಶವೆಂದು ಘೋಷಿಸುವಂತೆ ಸರಕಾರಕ್ಕೆ ಒತ್ತಡ ಹೇರಿದ್ದರು.

  1.  

ಮುಖ್ಯಮಂತ್ರಿಗಳ ನಿರ್ದೇಶನದಂತೆ ಕ್ಷೇತ್ರದ ಸುತ್ತ ಗಣಿಗಾರಿಕೆ ನಿಷೇಧಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ  ಮಾರ್ಗದರ್ಶನದಲ್ಲಿ ಮಂಗಳೂರು ಸಹಾಯಕ ಕಮಿಷನರ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರ ಮೂಲಕ ದೇವಸ್ಥಾನದ ಸುತ್ತಮುತ್ತ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು.

ಈ ಪರಿಶೀಲನೆಯ ವರದಿ ಆಧಾರದಲ್ಲಿ ಜಿಲ್ಲಾಧಿಕಾರಿ ಅವರು ಕಾರಿಂಜ ದೇವಸ್ಥಾನದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಿಷೇಧಿತ ಪ್ರದೇಶ ಎಂದು ಘೋಷಿಸುವ ಕುರಿತು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ಪ್ರಸ್ತುತ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು  ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಗಣಿಗಾರಿಕೆ ನಿಷೇಧಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ನೀಡಿದ್ದಾರೆ.

  1.  

Leave a Reply

Your email address will not be published. Required fields are marked *