ಮಕ್ಕಳ ಮೇಲಿನ ಶೋಷಣೆ, ದಬ್ಬಾಳಿಕೆ ತಡೆಗೆ ಮಕ್ಕಳ ರಕ್ಷಣಾ ಕಾಯ್ದೆ ಅನುಷ್ಠಾನ ಕಡ್ಡಾಯ: ನ್ಯಾಯಾಧೀಶೆ ದಿವ್ಯಶ್ರೀ

ಕಾರವಾರ: ಮಕ್ಕಳ ಮೇಲೆ ನಡೆವ ಅನ್ಯಾಯ, ದಬ್ಬಾಳಿಕೆ , ಶೋಷಣೆಗಳನ್ನು ತಡೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು ಅತ್ಯಂತ ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ. ಎಂ ಅವರು ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉತ್ತರ ಕನ್ನಡ ಜಿಲ್ಲೆಯ ಆಶ್ರಯದಲ್ಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ವಿವಿಧ ಇಲಾಖೆಗಳ ಭಾಗೀದಾರರಿಗೆ ಮಕ್ಕಳ ಹಕ್ಕುಗಳನ್ನು ಅನುಷ್ಠಾನಗೊಳಿಸಲು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ವಿವಿಧ ಕಾಯ್ದೆಗಳ ಕುರಿತ ತರಬೇತಿ
ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳ ಮೇಲೆ ಈ ಹಿಂದೆ ನಡೆಯುತ್ತಿದ್ದ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹದಂತಹ ದೌರ್ಜನ್ಯಗಳ ಜೊತೆಗೆ ಹೊಸ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದು, ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ ಇಂತಹ ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಇಂತಹ ಕಾರ್ಯಗಾರಗಳ ಮೂಲಕ ಪರಿಹಾರಕಂಡುಕೊಳ್ಳಬೇಕಿದೆ. ರಾಜ್ಯದಲ್ಲಿ ಈ ಬಾರಿ ಶಾಲಾ ಹಾಜರಾತಿಯ ಕೊರತೆಯಿಂದ ಸಾವಿರಾರು ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯದೇ ವಂಚಿತರಾಗಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಇಂತಹ ಮಕ್ಕಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ನವದೆಹಲಿಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶೈಕ್ಷಣಿಕ ಸಲಹೆಗಾರ್ತಿ ಅನುಬಾ ಜೈನ್ ಅವರು ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ, ಮಕ್ಕಳ ರಕ್ಷಣೆ, ಶಿಕ್ಷಣ, ಆರೋಗ್ಯದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಕಾಲೇಜುಗಳ ಮಟ್ಟದಲ್ಲಿ ರಕ್ಷಣೆ, ಆರೋಗ್ಯ ಕಾಳಜಿ ನಿಗವಹಿಸಬೇಕು. ಭಾರತ ದೇಶ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದೇಶವಾಗಿರುವುದರಿಂದ ಮಕ್ಕಳನ್ನು ರಕ್ಷಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ದೇಶದಾದ್ಯಂತ ಇರುವ ಮಕ್ಕಳಿಗೆ ಸುರಕ್ಷಿತ ಪರಿಸರ ಮತ್ತು ನೆಮ್ಮದಿಯ ವಾತಾವರಣ ಸೃಷ್ಠಿಸಲು ಕಾರ್ಯನಿರತವಾಗಿದ್ದು, ತಳಮಟ್ಟದಿಂದ ಆರಂಭವಾಗಬೇಕಿರುವ ಈ ಕಾರ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ರೀತಿಯ ನೆರವು ನೀಡಬೇಕು ಎಂದರು.

ಜಿಲ್ಲಾ ಪಂಚಾಯತ ಸಿಇಒ ಡಾ. ದಿಲೀಷ್ ಶಶಿ ಅವರು ಮಾತನಾಡಿ, ಸಮಾಜ ಅಭಿವೃದ್ಧಿಯಾಗಬೇಕಿದ್ದಲ್ಲಿ ಮಕ್ಕಳ ರಕ್ಷಣೆ ಮಾಡುವುದು ಅವಶ್ಯಕವಾಗಿದ್ದು, ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ, ಆಹಾರ, ರಕ್ಷಣೆ ಒದಗಿಸಬೇಕು, ಪಾಲಕರು ಮನೆಯಲ್ಲಿ ಮಕ್ಕಳಿಗೆ ಗೌರವ, ಧೈರ್ಯ, ಆತ್ಮವಿಶ್ವಾಸದ ಭಾವನೆ ಮೂಡಿಸಬೇಕು. ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೂ ಉತ್ತಮ ಗುಣಗಳನ್ನು ಬೆಳೆಸಬೇಕು. ಮಕ್ಕಳ ರಕ್ಷಣೆಯ ಬಗ್ಗೆ ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ಇರಬೆಕು ಹಾಗೂ ಈ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಪಾಟಿಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *