ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ದೇವಳಗಳ ನಿತ್ಯ ಅನ್ನದಾಸೋಹಕ್ಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನಲೆಯಲ್ಲಿ ದೇವಳಗಳಲ್ಲಿ ನಿತ್ಯದ ಮೆನುಗಳಲ್ಲಿ ಬದಲಾಣೆಗೆ ಮುಂದಾಗಿವೆ. ಇದರ ಭಾಗವಾಗಿ ಕಟೀಲು ದುರ್ಗಾಪರಮೇಶ್ವರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಸಿಲಿಂಡರ್ ಪೂರೈಕೆ ಆಗದೇ ಇದಲ್ಲಿ ಕಟ್ಟಿಗೆ ಒಲೆಗೆ ಬಳಸಿ ಭಕ್ತರ ಹಸಿವು ತಣಿಸುವ ಕೆಲಸಕ್ಕೆ ದೇವಳ ಆಡಳಿತ ಮಂಡಳಿಗಳು ದಿಟ್ಟಹೆಜ್ಜೆ ಇಟ್ಟಿವೆ.
ಯುದ್ಧದ ಎಫೆಕ್ಟ್ ನಿಂದಾಗಿ ದೇವಳಗಳಿಗೂ ಕೂಡ ಗ್ಯಾಸ್ ಪೂರೈಕೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುತ್ತಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಬೆಳಗಿನ ಉಪಹಾರಕ್ಕೂ ಗ್ಯಾಸ್ ಬಿಸಿ ತಟ್ಟಿದೆ. ಪರಿಣಾಮ ಜಿಲ್ಲೆಯ ಕೆಲ ದೇವಳಗಳಲ್ಲಿ ಅನ್ನಪ್ರಸಾದ ವಿತರಣೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡಬಾರದು ಎಂಬ ಉದ್ದೇಶದಿಂದ ದೇವಳಗಳ ಆಡಳಿತ ಮಂಡಳಿಗಳು ದಿಟ್ಟ ತೀರ್ಮಾನಕ್ಕೆ ಮುಂದಾಗಿದ್ದು, ಗ್ಯಾಸ್ ಸಿಗದೇ ಇದ್ದಲ್ಲಿ ಕಟ್ಟಿಗೆ ಬಳಕೆ ಮಾಡುವ ಮೂಲಕ ಭಕ್ತರ ಹಸಿವು ತಣಿಸುವ ಮಹಾತ್ಕಾರ್ಯಕ್ಕೆ ಮುಂದಾಗಿವೆ.

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅನ್ನಪ್ರಸಾದ ವ್ಯವಸ್ಥೆಗೆ ಇನ್ನು 2 ದಿನಗಳ ಮಟ್ಟಗೆ ಗ್ಯಾಸ್ ವ್ಯವಸ್ಥೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟಿಗೆ ಒಲೆಯನ್ನು ಬಳಕೆಗೆ ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಪ್ರತಿದಿನ ಸಾವಿರಾರೂ ಮಂದಿ ಭಕ್ತರು ಅನ್ನಪ್ರಸಾದ ಸೇವನೆ ಮಾಡುತ್ತಾರೆ. ಇಲ್ಲಿನ ಶಾಲೆಗಳ ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಕೂಡ ಗ್ಯಾಸ್ ಸಿಲಿಂಡರ್ ಅನ್ನು ಅವಲಂಬನೆ ಮಾಡಲಾಗಿದೆ. ಆದರೆ ಇವೆಲ್ಲ ಸಮಸ್ಯೆಗಳನ್ನು ಎದುರಿಸಲು ದೇವಳಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ನು ಎರಡು ದಿನಗಳ ಕಾಲ ಗ್ಯಾಸ್ ಸಾಕಾಗುತ್ತದೆ. ಕಟ್ಟಿಯಲ್ಲಿ ಅಡುಗೆ ಮಾಡುವ ಅನುಭವಿಗಳು ಇದ್ದಾರೆ. ಕಟ್ಟಿಗೆ ಸಿಗಬೇಕಷ್ಟೇ. ಅದಕ್ಕಾಗಿ ಕಟ್ಟಿಗೆ ಸಂಗ್ರಹ ಮಾಡಲಾಗುತ್ತದೆ. ಗುರುವಾರ ಸಭೆಯ ನಡೆಸಲಾಗುತ್ತದೆ. ಭಕ್ತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದ ಹಾಗೇ ಭಕ್ತರಿಗೆ ಅನ್ನದಾಸೋಹ ನಡೆಯಲಿದೆ. ಪ್ರಸಾದ ಮೆನುವಿನಲ್ಲಿ ಭಾರಿ ಪ್ರಮಾಣ ಬದಲಾವಣೆ ಮಾಡಲ್ಲ, ಅನ್ನ, ಸಾರು, ಪಾಯಸ್ ಇರುತ್ತದೆ. ಪಲ್ಯದ ಬದಲಾಗಿ ಚಟ್ನಿ ತಯಾರಿ ಮಾಡುತ್ತೇವೆ. ಎಲ್ಲವೂ ಸರಿ ಹೋದರೆ ಯಾವುದೇ ಬದಲಾವಣೆ ಇಲ್ಲ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ದಾಸ ಅಸ್ರಣ್ಣ ತಿಳಿಸಿದ್ದಾರೆ.
ಕುಕ್ಕೆ ಅನ್ನಪ್ರಸಾದಕ್ಕೂ ಗ್ಯಾಸ್ ಟ್ರಬಲ್ ಶುರುವಾಗಿದೆ. ಪ್ರತಿನಿತ್ಯ 20 ಸಿಲಿಂಡರ್ ಅಗತ್ಯ ಇದ್ದು, ಈಗ 18 ಮಾತ್ರ ಪೂರೈಕೆ ಆಗುತ್ತಿವೆ. ಇನ್ನೆರಡು ದಿನಕ್ಕೆ ಸಾಕಾಗಬಹುದು. ಇದಕ್ಕಾಗಿ ದೇವಳದಿಂದ ಗ್ಯಾಸ್ ಪೂರೈಕೆಗೆ ಪತ್ರ ಬರೆಯಲಾಗಿದೆ. ಈಗಾಗಲೇ ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಪಲ್ಯ ಮಾತ್ರ ಮಾಡಲಾಗುವುದಿಲ್ಲ. ಅನ್ನ, ಸಾಂಬಾರು, ಚಟ್ನಿ, ಪಾಯಸ್, ಮಜ್ಜಿಗೆ ಮಾಡಲಾಗುತ್ತದೆ. ಬೆಳಗಿನ ಉಪಹಾರದ ಮೆನುವಿನಲ್ಲಿ ಅವಲಕ್ಕಿ ನೀಡಲಾಗುತ್ತದೆ. ಹೆಸರು ಬೆಳೆ ನೀಡಲಾಗುತ್ತದೆ. ದಿನ ಬಿಟ್ಟು ಹೆಸರು ಬೆಳೆ ನೀಡಲಾಗುತ್ತಿತ್ತು, ಆದರೆ ಈಗ ಎರಡು ದಿನ ಅವಲಕ್ಕಿ ನೀಡುತ್ತೇವೆ ಎಂದು ಕುಕ್ಕೆ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತ್ತಕುಡಿ ತಿಳಿಸಿದ್ದಾರೆ.
ದೇವಳಗಳಲ್ಲಿ ನಿಲ್ಲಲ್ಲ ಅನ್ನದಾಸೋಹ
ಕಟೀಲು ಹಾಗೂ ಕುಕ್ಕೆ ಕ್ಷೇತ್ರಗಳಲ್ಲಿ ದಿನನಿತ್ಯ ಬರುವ ಭಕ್ತರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ಒಂದು ವೇಳೆ ಸಂಪೂರ್ಣವಾಗಿ ಸ್ಥಗಿತ ಆದಲ್ಲಿ ಭಕ್ತರ ಹಸಿವು ತಣಿಸುವ ಪ್ರಸಾದ ತಯಾರಿಗೆ ಕಟ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದೇ ದಾರಿಯಲ್ಲಿ ಕರಾವಳಿ ಜಿಲ್ಲೆಯ ಕೆಲ ದೇವಳಗಳಲ್ಲಿ ಬಿಕ್ಕಟ್ಟು ಎದುರಿಸುವುದಕ್ಕೆ ಆಡಳಿತ ಮಂಡಳಿಗಳು ಸಿದ್ದತೆ ಮಾಡಿಕೊಂಡಿವೆ.
ಹೊಟೇಲ್ ಗಳಿಗೂ ತಟ್ಟಿದ ಬಿಸಿ, ಬಂದ್ ಮಾಡುವ ಚಿಂತನೆ
ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಬಾರಿ ಹೊಡೆತ ಬೀಳುವ ಸಾಧ್ಯತೆ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಕೆಲ ಸಣ್ಣ ಪ್ರಮಾಣದ ಹೊಟೇಲ್ ಸೇರಿದಂತೆ ದೊಡ್ಡ ದೊಡ್ಡ ಹೊಟೇಲ್ ರೆಸ್ಟೊರೆಂಟ್ ಗಳಲ್ಲಿ ಇನ್ನು ಎರಡು ದಿನಗಳಲ್ಲಿ ಬಾಗಿಲು ಮುಚ್ಚುವ ಚಿಂತನೆ ನಡೆಸಿವೆ. ಇನ್ನು ಕೆಲ ಹೊಟೇಲ್ ಗಳಲ್ಲಿ ಮೆನು ಕೂಡ ಬದಲಾವಣೆ ಮಾಡಲಾಗುತ್ತಿದೆ. ಇನ್ನು ಎರಡ್ಮೂರು ದಿನಗಳವರೆಗೆ ಸಿಲಿಂಡರ್ ಸಮಸ್ಯೆ ಇಲ್ಲ, ಇನ್ನು ಕೆಲ ಕಡೆಗಳಲ್ಲಿ ದುಪ್ಪಟ್ಟು ದರ ಕೊಟ್ಟು ಸಿಲಿಂಡರ್ ಖರೀದಿ ಮಾಡುತ್ತಿರುವ ಸನ್ನಿವೇಶಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗೆ ಆದಲ್ಲಿ ಹೊಟೇಲ್ ಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಹೊಟೇಲ್ ಮಾಲೀಕರೊಬ್ಬರು ತಿಳಿಸಿದರು.



