ಕೆಎಂಸಿ ಆಸ್ಪತ್ರೆಯಲ್ಲಿ ನೆಫ್ರೋಲಜಿಸ್ಟ್‌ ವೈದ್ಯರ ತಂಡ, ಅಡ್ವಾನ್ಸ್‌ಡ್ ಸೇವೆ ಲಭ್ಯ, ಕಿಡ್ನಿ ಸಮಸ್ಯೆಗೆ ಶೀಘ್ರ ಚಿಕಿತ್ಸೆ ಬೇಕು: ಡಾ. ಅಶೋಕ್ ಭಟ್

ಮಂಗಳೂರು: ಕಿಡ್ನಿ ಸಮಸ್ಯೆಯನ್ನು ಪ್ರಾರಂಭದ ಹಂತದಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಆರೋಗ್ಯಕರ ಜೀವನ ನಡೆಸಬಹುದು. ಅಧಿಕ ರಕ್ತದೊತ್ತಡ, ಮಧುಮೇಹ, ವಂಶಪಾರಂಪರ್ಯವಾಗಿ ಕಿಡ್ನಿ ಕಾಯಿಲೆ ಹೊಂದಿದವರು ತಪಾಸಣೆ ನಡೆಸಿ, ಆರಂಭಿಕ ಹಂತದಲ್ಲಿ ಕಿಡ್ನಿ ಕಾಯಿಲೆ ಪತ್ತೆ ಹಚ್ಚಿದರೆ ಕಿಡ್ನಿ ವೈಫಲ್ಯ ತಡೆಗಟ್ಟಬಹುದು ಎಂದು ಮಂಗಳೂರು ಕೆಎಂಸಿ ಹಿರಿಯ ನೆಫ್ರೋಲಜಿ ತಜ್ಞ ಡಾ. ಅಶೋಕ್ ಭಟ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಅನುಭವಗಳನ್ನು ಹಂಚಿಕೊಳ್ಳುವುದಕ್ಕೂಇಲ್ಲಿ ವೇದಿಕೆ ಸಿದ್ದ ಮಾಡಲಾಗಿದೆ. ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆಯಿಂದ ಕಿಡ್ನಿ ಸಮಸ್ಯೆಯನ್ನು ತಗ್ಗಿಸಬಹುದು. ಅಂಗಾಂಗ ದಾನದ ಬಗ್ಗೆ ದಾನಿಗಳು ನೋಂದಣಿ ಮಾಡಿದ ಬಳಿಕ ಕುಟುಂಬಿಕರಿಗೆ ದಾನದ ಬಗ್ಗೆ ತಿಳಿಸಬೇಕು. ಇತ್ತೀಚಿನ ದಿನಗಳಲ್ಲಿ ಕಿಡ್ನಿಸಮಸ್ಯೆ ಹೆಚ್ಚಾಗುತ್ತಿದ್ದು, ಒತ್ತಡದ ಜೀವನ ಶೈಲಿಯಿಂದಾಗಿ ಇಂತಹ ಸಮಸ್ಯೆಗಳು ಜಾಸ್ತಿ ಆಗುತ್ತಿವೆ ಎಂದರು.

ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆ ಕುರಿತು ಜಾಗೃತಿ ಹೆಚ್ಚಿಸುವ ನೇತೃತ್ವವನ್ನು ಆಸ್ಪತ್ರೆಯ ನೆಫ್ರೊಲಜಿ ವಿಭಾಗ ಕೈಗೊಂಡಿದೆ. ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆ ಹಾಗೂ ಅತಿದೊಡ್ಡದಾದ ಡಯಾಲಿಸಿಸ್ ಘಟಕವನ್ನು ಹೊಂದಿದ್ದು, 24 ಗಂಟೆ ಸೇವೆಗೆ ಅನುಭವಿ ನಫ್ರೋಲಜಿಸ್ಟ್‌ಗಳನ್ನು ಹೊಂದಿದೆ ಎಂದರು.

ಹಿರಿಯ ನೆಫ್ರೋಲಜಿ ತಜ್ಞ ಡಾ. ಸುಶಾಂತ್ ಕುಮಾರ್ ಅವರು ಮಾತನಾಡಿ, ಡಯಾಲಿಸಿಸ್‌ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ವೈಫಲ್ಯ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ. ಆದರೆ, ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ಸರ್ಕಾರದ ಯೋಜನೆ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಕಾಯ್ದೆಗೆ ಅನುಗುಣವಾಗಿ ಎಲ್ಲ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.

ನೆಫ್ರೋಲಜಿ ವಿಭಾಗದ ಮುಖ್ಯಸ್ಥ ಡಾ. ಮಯೂರ್ ಪ್ರಭು ಅವರು ಮಾತನಾಡಿ, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ಅಡ್ವಾನ್ಸ್‌ಡ್ ಡಯಾಲಿಸಿಸ್ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್‌ಡ್ ಡಯಾಗ್ನೋಸ್ಟಿಕ್ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರೋಲಜಿ ಸೌಲಭ್ಯ ರೂಪಿಸಿದ್ದೇವೆ ಎಂದರು.
ಡಾ. ದುಷ್ಯಂತ್, ಪಿಆರ್‌ಒ ರಾಕೇಶ್ ಇದ್ದರು.

Leave a Reply

Your email address will not be published. Required fields are marked *