ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಬದ್ಧ: ಡಿ. ವಾಸುದೇವ ಕಾಮತ್

 

 

ಮಂಗಳೂರು: ಕೆನರಾ ಕಾಲೇಜು ಹಾಗೂ ಕೆನರಾ ಎಂಜಿನಿಯರಿಂಗ್ ಕಾಲೇಜುಗಳಿಗೆ 2025 26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸ್ವಾಯತ್ತ ಸ್ಥಾನಮಾನ ಸಿಕ್ಕಿದ್ದು, ಕಾಲೇಜಿನ ಅಭ್ಯುದಯಕ್ಕೆ ಸಹಕಾರಿ ಆಗಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮೌಲ್ಯಾಧಾರಿತ ಶಿಕ್ಷಣಕ್ಕೆ ಬದ್ಧ ಆಗಿರುವ ಸಂಸ್ಥೆ ಆಗಿದ್ದು, 1973ರಲ್ಲಿ ಸ್ಥಾಪಿತ ಆಗಿರುವ ಕೆನರಾ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿದ್ದು, ಐದು ದಶಕಗಳಲ್ಲಿ ಮಂಗಳೂರು ನಗರದಲ್ಲಿನ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ.
ಕೆನರಾ ಕಾಲೇಜು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ 3.21 ಸಿ.ಜಿ.ಪಿ.ಎ, ‘ಎ’ ಶ್ರೇಣಿ ಮಾನ್ಯತೆ ಪಡೆದಿದ್ದು ಇದು ಇಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಶ್ರೇಷ್ಠತೆ ಹಾಗೂ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

1569 ವಿದ್ಯಾರ್ಥಿಗಳು ಮತ್ತು 85 ಅರ್ಹ ಉಪನ್ಯಾಸಕ ಹಾಗೂ ಸಿಬ್ಬಂದಿ ಶಿಸ್ತು, ಹೊಸತನ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವ ಚೈತನ್ಯಯುತವಾದ ಶೈಕ್ಷಣಿಕ ವಾತಾವರಣವನ್ನು ಕಾಪಾಡಿಕೊಂಡಿದ್ದು, 53 ವರ್ಷಗಳ ಪಯಣದಲ್ಲಿ ಕೆನರಾ ಕಾಲೇಜು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 135 ರ್‍ಯಾಂಕ್ ಗಳನ್ನು ಗಳಿಸಿ ನಿರಂತರವಾಗಿ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಿದೆ. ವಿಶೇಷವಾಗಿ 2023 -24 ಮತ್ತು 2024- 25ನೇ ಶೈಕ್ಷಣಿಕ ವರ್ಷಗಳಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 12 ರ್‍ಯಾಂಕ್ ಗಳನ್ನು ಪಡೆದಿದ್ದು ಅದರ ಶಕ್ತಿಶಾಲಿ ಶೈಕ್ಷಣಿಕ ಸಾಧನೆಗೆ ಸಾಕ್ಷಿ ಆಗಿದೆ ಎಂದರು.

ಸಂಚಾಲಕ ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಕೋಶಾಧಿಕಾರಿ ಸಿಎ ಜಗನ್ನಾಥ ಕಾಮತ್ ಅವರು ಮಾತನಾಡಿ, ಬಿಸಿಎ ಮತ್ತು ಎಂಸಿಎ ವಿಭಾಗಗಳು ಸಂಸ್ಥೆಯ ಪ್ರಮುಖ ಶೈಕ್ಷಣಿಕ ಆಧಾರ ಸ್ಥಂಭಗಳಾಗಿದ್ದು ಗುಣಮಟ್ಟದ ಬೋಧನೆ, ಕೈಗಾರಿಕಾ ಆಧಾರಿತ ಪಠ್ಯಕ್ರಮ ಮತ್ತು ಕಂಪ್ಯೂಟರ್ ಅನ್ವಯಿಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಭದ್ರ ಬುನಾದಿ ಆಗಿದೆ ಎಂದರು.

ಸರಕಾರ, ಕಾರ್ಪೊರೇಟ್ ಸಂಸ್ಥೆಗಳು, ಶೈಕ್ಷಣಿಕ, ಉದ್ಯಮ ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿರುವ ಬಲಿಷ್ಠ ಹಾಗೂ ನೈಪುಣ್ಯತೆ ಹೊಂದಿದ ಹಳೆ ವಿದ್ಯಾರ್ಥಿ ಸಂಘವು ಈ ಕಾಲೇಜಿಗೆ ಕಿರೀಟ ಪ್ರಾಯ ಆಗಿದೆ ಎಂದರು.

ಶೈಕ್ಷಣಿಕ ವರ್ಷ 2025 26ನೇ ಸಾಲಿನಲ್ಲಿ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಬಂದಿರುವುದನ್ನು ಹೆಮ್ಮೆಯಿಂದ ಘೋಷಿಸುತ್ತೇವೆ. ಇದು ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಮೈಲುಗಲ್ಲು ಆಗಿದೆ. ಸ್ವಾಯತ್ತ ಸ್ಥಾನಮಾನದಿಂದ ಸಮಾಜ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸುವ, ಪರಿಷ್ಕರಿಸುವ ಅಧಿಕಾರವೂ ದೊರೆತಿರುವುದು. ಇದರ ಮೂಲಕ ಸಮಕಾಲಿನ ಕೌಶಲ್ಯ ಆಧಾರಿತ ಬಹುಶಾಖೆ ಮತ್ತು ವೃತ್ತಿ ಕೇಂದ್ರಿತ ಪಠ್ಯಕ್ರಮಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಮತ್ತು ಪ್ರಸ್ತುತ ಅವಶ್ಯಕತೆಗಳಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಸಾಧ್ಯ ಆಗುತ್ತದೆ ಎಂದರು.

ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಕೆಳಗಿನ ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡ ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಲು ಕಾಲೇಜು ಪ್ರಸ್ತಾವಗಳನ್ನು ಸಲ್ಲಿಸಿದ್ದು, ಲಾಜಿಸ್ಟಿಕ್ಸ್‌ನಲ್ಲಿ ಬಿಬಿಎ, ಡೇಟಾ ಅನಾಲಿಟಿಕ್ಸ್‌ನಲ್ಲಿ ಬಿಸಿಎ, ಬಿಸಿನೆಸ್ ಡೇಟಾ ಅನಾಲಿಟಿಕ್ಸ್‌ನಲ್ಲಿ ಬಿ.ಕಾಂ ಶಿಕ್ಷಣದಲ್ಲಿ ಮೇಲಿನ ಪಠ್ಯ ಕ್ರಮವನ್ನು ಪ್ರಸ್ತುತ ಮಾರುಕಟ್ಟೆ ಅಗತ್ಯಗಳಿಗೆ ಹೊಂದುವ ಉದ್ದೇಶದಿಂದ ಲಾಜಿಸ್ಟಿಕ್ಸ್ ನಿರ್ವಹಣೆ ಡೇಟಾ ಸೈನ್ಸ್ ಮತ್ತು ವ್ಯವಹಾರ ವಿಶ್ಲೇಷಣೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು.

ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್, ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಕೋಶಾಧಿಕಾರಿ ಸಿಎ ಎಂ ವಾಮನ್ ಕಾಮತ್, ಕೆನರಾ ವಿಕಾಸ್ ಕಾಲೇಜಿನ ಕೋ- ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಇದ್ದರು.

 

  1.  

Leave a Reply

Your email address will not be published. Required fields are marked *