ಇದೇ 15 ರಿಂದ ಅದ್ಯಪಾಡಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ: ನಾಗರಾಜ ಶೆಟ್ಟಿ

 

 

ಮಂಗಳೂರು: ಇದೇ 15 ರಿಂದ 20ರವರೆಗೆ ಮಂಗಳೂರು ತಾಲ್ಲೂಕಿನ ಆದ್ಯಪಾಡಿಯ ದೈವಂಗಳಗುಡ್ಡೆ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ವಿಜೃಂಬಣೆಯಿಂದ ನಡೆಯಲಿದೆ. ಈಗಾಗಲೇ 2 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ ಅವರ ಮಾರ್ಗದರ್ಶನದಲ್ಲಿ ಎ‌ಲ್ಲ ಕಾರ್ಯಗಳು ವಿಧಿವತ್ತಾಗಿ ನಡೆಯುತ್ತಿವೆ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ನಾಗರಾಜ ಶೆಟ್ಟಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರದಲ್ಲಿ ರುದ್ರಯಾಗ ಹಾಗೂ ಸಹಸ್ರನಾಳಿಕೇರ ಮಹಾಗಣಪತಿ ಹೋಮ ಕೂಡ ವಿಶಿಷ್ಟವಾಗಿ ನಡೆಯಲಿದೆ. ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ ಅವರ ನೇತೃತ್ವದಲ್ಲಿ ನಾಲ್ಕನೇ ಬಾರಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, 15 ರಂದು ಹೊರೆಕಾಣಿಕೆ ಕಾರ್ಯಕ್ರಮನಡೆಯಲಿದೆ ಎಂದರು.

ದೈವ ದೇವರು ನೆಲೆವೀಡು ಬೈಲುಮಾಗಣೆ ಅದ್ಯಪಾಡಿ ಪುಣ್ಯ ಕ್ಷೇತ್ರಗಳಲ್ಲಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಕೂಡ ಭಕ್ತರ ಮನೋಭೀಷ್ಟವನ್ನು ಅನುಗ್ರಹಿಸುವ ಮಹಾಗಣಪತಿ ದೇವರು, ಈಶ್ವರ ದೇವರು ಮತ್ತು ನಾಗದೇವರ ಜತೆಗೆ ದೈವಂಗಳಗುಡ್ಡೆಯ ದೈವಗಳ ಸಾನಿಧ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಾಲಯಕ್ಕೆ ವಿಶಿಷ್ಟ ಶಕ್ತಿ ಇದೆ ಎಂದರು.

ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ದೇಸ್ಥಾನದ ಮೊಕ್ತೇಸರರಾದ ಮಂಜುನಾಥ ಭಂಡಾರಿ ಶೆಡ್ಡಿ ಅವರ ನೇತೃತ್ವದಲ್ಲಿ ನಾಲ್ಕನೇ ಸಲದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ನಾಲ್ಕು ಬಾರಿಯೂ ನಡೆದ ಬ್ರಹ್ಮಕಲಶೋತ್ಸವ ಸನಾತನ ಧರ್ಮದ ಸೂತ್ರಕ್ಕ ಅನುಗುಣವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತಿದೆ ಎನ್ನುವುದು ಉಲ್ಲೇಖನೀಯ. ಈ ಸಲದ ಬ್ರಹ್ಮಕಲಶೋತ್ಸವವು ಇದೇ ಮಾರ್ಚ್ 15 ರಿಂದ 20 ರವರೆಗೆ ನಡೆಸಲಾಗುತ್ತಿದೆ ಎಂದರು.

ಸಾಮಾಜಿಕ ಬದ್ಧತೆ ಹೊಂದಿರುವ ದೇವಳದಲ್ಲಿ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಿಗೆ 18,000 ಚದರ ಅಡಿಗೂ ಮಿಕ್ಕಿದ ವಿಸ್ತೀರ್ಣದ ಸಭಾಂಗಣದ ಜತೆಗೆ ಆಸನಗಳು, ಪಾಕಶಾಲೆಯಲ್ಲದೆ ವಿದ್ಯುತ್ತ ಅನ್ನು ಇಪ್ಪತ್ತೈದು ವರ್ಷಗಳಿಂದಲೂ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ದೇವಳಕ್ಕೆ ಪೂರಕವಾಗಿ ಭಕ್ತರ ಅನುಕೂಲಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಸಮಾಜದ ಬಂಧುಗಳ ಸಹೃದಯಿ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ಸಾಲಿನ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ದಾನಿಗಳ ಸಹಕಾರದಿಂದ ಅವೆಲ್ಲವೂ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ಆರು ದಿನಗಳ ಕಾಲ ನಡೆವ ಈ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬರುವ ಎಲ್ಲ ಭಕ್ತರಿಗೆ ಬೆಳಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ರಹ್ಮಕಲಶೋತ್ಸವದ ಈ ಆರೂ ದಿನಗಳ ಕಾಲ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಊರ ಪರವೂರಿನ ಸಮಸ್ತ ಭಕ್ತ ಬಂಧುಗಳು ಸಕುಟುಂಬಿಕರಾಗಿ ಪಾಲ್ಗೊಂಡು ದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ, ಬ್ರಹ್ಮಕಲಶೋತ್ಸವದ ಹರೀಶ್ ಶೆಟ್ಟಿ,ರವಿರಾಜ ಶೆಟ್ಟಿ, ಕೃಷ್ಣಮೂರ್ತಿ, ದಿವಾಕರ ಸಾಮಾನಿ, ಸುಜೀರ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *