ದ.ಕ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಟಾಪರ್, ಆದರೆ, ಯುಪಿಎಸ್‍ಸಿ ಪಟ್ಟಿಯಲ್ಲಿ ಜಿಲ್ಲೆಯಿಂದ ಒಬ್ಬರೂ ಇರದೇ ಇರುವುದು ಬೇಸರದ ಸಂಗತಿ: ಜಿ.ಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿದ್ದರೂ, ಇಲ್ಲಿನ ಪ್ರತಿಭಾವಂತರು ವೃತ್ತಿ ಬದುಕಿಗೆ ಹೊರರಾಜ್ಯ ಮತ್ತು ವಿದೇಶಗಳನ್ನು ಅವಲಂಭಿಸುತ್ತಿದ್ದು, ಇದರಿಂದ ಸ್ಥಳೀಯ ಕೌಶಲ್ಯ ಉದ್ಯೋಗಗಳಿಗೆ ಅರ್ಹರು ಲಭ್ಯ ಆಗದಿರುವುದು ಕಳವಳಕಾರಿ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಹೇಳಿದರು.

 

ಸೋಮವಾರ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಯೋಜನೆ ತಯಾರಿಸುವ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐಎಎಸ್, ಐಪಿಎಸ್‍ಗಳನ್ನು ಆಯ್ಕೆ ಮಾಡುವ ಯುಪಿಎಸ್‍ಸಿ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರೂ ಆಯ್ಕೆ ಆಗಿಲ್ಲ. ಆದರೆ, ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇರುವ ಯಾದಗಿರಿ ಜಿಲ್ಲೆಯಿಂದ ನಾಲ್ಕು ಮಂದಿ ಫಲಿತಾಂಶದಲ್ಲಿ ಉನ್ನತ ಸ್ಥಾನಗಳಿಗೆ ಆಯ್ಕೆ ಆಗಿದ್ದಾರೆ. ಈ ನಿಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದ ನೋಡಲ್ ಅಧಿಕಾರಿ, ಕೆ.ಪಿ.ಟಿ. ಹಿರಿಯ ಉಪನ್ಯಾಸಕ ಹರೀಶ್ ಸಿ.ಪಿ. ಮಾತನಾಡಿ, ಜಿಲ್ಲೆಯಲ್ಲಿ ಲಭ್ಯವಾಗುವ ಉದ್ಯೋಗಗಳಿಗೆ ಕೌಶಲ್ಯಯುತ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಜಿಲ್ಲೆಯಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು, ಪಾಲಿಟೆಕ್ನಿಕ್, ಐಟಿಐ, ಕೆಜಿಟಿಟಿಐ ಮತ್ತಿತರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಒತ್ತು ನೀಡಲಾಗುವುದು. ಇದಕ್ಕಾಗಿ ಕೈಗಾರಿಕೆ, ಉದ್ಯಮಗಳಿಂದಲೂ ಸೂಕ್ತ ಮಾಹಿತಿ ಪಡೆದು, ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲಗಳನ್ನು ಒದಗಿಸುವುದು ಇದರ ಉದ್ದೇಶ ಎಂದರು.

ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಡಿ. ಪೂಜಾರಿ ಅವರು ಮಾತನಾಡಿ, ಐಟಿಐ, ಡಿಪ್ಲೊಮಾ ಮತ್ತಿತರ ತಾಂತ್ರಿಕ ಶಿಕ್ಷಣ ಕಲಿತು ಹೊರಬರುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ದೊರಕುವಂತಾಗಲು ಆಯಾ ಶಿಕ್ಷಣ ಸಂಸ್ಥೆಗಳು ನಿರಂತರ ಗಮನಹರಿಸಬೇಕು. ಅವರಿಗೆ ಸಮರ್ಪಕ ತರಬೇತಿ ದೊರಕಿದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಸಮರ್ಥರಾಗಲಿದ್ದಾರೆ. ಇತೀಚೆಗೆ ಐಟಿಐ, ಡಿಪ್ಲೊಮಾ ಸೇರಿದಂತೆ ತಾಂತ್ರಿಕ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಡೆಲಿವರಿ ಉದ್ಯೋಗ ಸೇರಿದಂತೆ ಬೇರೆ ಕ್ಷೇತ್ರದತ್ತ ಮುಖ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಇದನ್ನು ತಪ್ಪಿಸಿ, ಕಲಿತ ಶಿಕ್ಷಣದಲ್ಲಿಯೇ ಉದ್ಯೋಗ ದೊರಕಿಸಲು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯು ಒತ್ತು ನೀಡಬೇಕು ಎಂದರು.

ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ಎನ್‍ಐಟಿಕೆ ಉಪನ್ಯಾಸಕ ಪ್ರೊ. ಉದಯ ಭಟ್ ಇದ್ದರು. ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರದೀಪ್ ಡಿಸೋಜ ಸ್ವಾಗತಿಸಿದರು

  1.  

Leave a Reply

Your email address will not be published. Required fields are marked *