ಅಲ್ಪಸಂಖ್ಯಾತರ ಓಲೈಕೆಯ ಬಜೆಟ್, ಸಾಮಾಜಿಕ ನ್ಯಾಯವೇ ಮಾಯ: ಎಂಎಲ್ಸಿ ಕಿಶೋರ್ ಕುಮಾರ್

 

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 12ನೇ ಆಯವ್ಯಯವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಾಲಿಗೆ ಸಂಪೂರ್ಣ ನಿರಾಶಾದಾಯಕ ಆಗಿದ್ದು, ಕರಾವಳಿಯ ಜನತೆಗೆ ಸರ್ಕಾರ ಎಸಗಿದ ಬಹುದೊಡ್ಡ ದ್ರೋಹ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಎಂಎಲ್ ಸಿ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಬರಿದು ಮಾಡಿರುವ ಸರ್ಕಾರ, ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮದ್ಯ ಮಾರಾಟದ ಆದಾಯವನ್ನೇ ಸಂಪೂರ್ಣ ನೆಚ್ಚಿಕೊಂಡಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಬೀದಿಗೆ ತಳ್ಳುವ ಮೂಲಕ, ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ ಆ ದುಡ್ಡಿನಲ್ಲಿ ಸರ್ಕಾರ ನಡೆಸುವಂತಹ ಶೋಚನೀಯ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಆರ್ಥಿಕ ಶಿಸ್ತು ಸಂಪೂರ್ಣ ಹದಗೆಟ್ಟಿದ್ದು, ಈ ವರ್ಷವೇ ಬರೋಬ್ಬರಿ 1 ಲಕ್ಷ 32 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಸಾಲ ಮಾಡಲು ಸರ್ಕಾರ ಹೊರಟಿದೆ. ಇದರಿಂದ ರಾಜ್ಯದ ಒಟ್ಟು ಸಾಲ 8.24 ಲಕ್ಷ ಕೋಟಿ ರೂ. ಗಡಿ ದಾಟಲಿದ್ದು, ಹುಟ್ಟುವ ಪ್ರತಿಯೊಂದು ಮಗುವಿನ ಮೇಲೂ ಸರ್ಕಾರ ಸಾಲದ ಹೊರೆ ಹೊರಿಸುತ್ತಿದೆ. ಭವಿಷ್ಯದ ಪೀಳಿಗೆಗೆ ಈ ಸರ್ಕಾರ ಮಾಡುತ್ತಿರುವ ಅತಿ ದೊಡ್ಡ ದ್ರೋಹವಿದು ಎಂದರು.

ಕರಾವಳಿಯ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದರೂ, ಉಭಯ ಜಿಲ್ಲೆಗಳ ಕಡಲತೀರಗಳು ಹಾಗೂ ಧಾರ್ಮಿಕ ಕೇಂದ್ರಗಳನ್ನು ಒಳಗೊಂಡ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಅಥವಾ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿಲ್ಲ. ಬದಲಾಗಿ ಕೇವಲ ತಮ್ಮ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಅಲ್ಪಸಂಖ್ಯಾತರಿಗಾಗಿ ಭರ್ಜರಿ ಯೋಜನೆಗಳನ್ನು ಪ್ರಕಟಿಸಿರುವುದು ಸರ್ಕಾರದ ಓಲೈಕೆ ರಾಜಕಾರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.

ಉಭಯ ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಬಜೆಟ್‌ನಲ್ಲಿ ಸಂಪೂರ್ಣ ಮೌನ ವಹಿಸಲಾಗಿದೆ. ಪುತ್ತೂರು ಭಾಗದ ಜನರ ಬಹುಕಾಲದ ಹಾಗೂ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಘೋಷಣೆ ಮಾಡದೇ ಸರ್ಕಾರ ಪುತ್ತೂರು ಜನರ ಕಣ್ಣಿಗೆ ಮಣ್ಣೆರಚಿದೆ ಎಂದರು.

ಕರಾವಳಿ ತೀರದಲ್ಲಿ ಉಲ್ಬಣವಾಗುತ್ತಿರುವ ಕಡಲ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಯಾವುದೇ ಯೋಜನೆ ಇಲ್ಲ. ಮೀನುಗಾರರ ಅಭಿವೃದ್ಧಿಗೆ ಹೊಸ ಕಾರ್ಯಕ್ರಮಗಳಿಲ್ಲ. ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದೆ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕೇವಲ ಮಾಣಿ ಮತ್ತು ಸಜೀಪನಡುವಿನಲ್ಲಿ ನೂತನ ಪೊಲೀಸ್ ಠಾಣೆಗಳನ್ನು ಘೋಷಿಸಿ ಕರಾವಳಿಯ ಅಭಿವೃದ್ಧಿ ಮುಗಿಯಿತು ಎಂಬ ಭ್ರಮೆಯಲ್ಲಿ ಸರ್ಕಾರ ಇದೆ ಎಂದು ಆರೋಪಿಸಿದರು.

ಇನ್ನು ಗ್ರಾಮೀಣಾಭಿವೃದ್ಧಿಯ ಜೀವನಾಡಿಯಾಗಿರುವ ಗ್ರಾಮ ಪಂಚಾಯತ್ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವನ್ನು ಸರ್ಕಾರ ಮಾಡಿದೆ. ಪಂಚಾಯತ್‌ಗಳಿಗೆ ನೀಡಬೇಕಾದ ಶಾಸನಬದ್ಧ ಅನುದಾನಗಳಿಗೆ ಕತ್ತರಿ ಹಾಕಲಾಗಿದ್ದು, ಹಳ್ಳಿಗಳ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಯೋಜನೆಗಳಿಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯನ್ನು ಕೇವಲ ತೆರಿಗೆ ವಸೂಲಿ ಕೇಂದ್ರವಾಗಿ ಮಾತ್ರ ನೋಡುತ್ತಿರುವ ಹಾಗೂ ಅಭಿವೃದ್ಧಿ ವಿರೋಧಿ ಧೋರಣೆ ಅನುಸರಿಸುತ್ತಿರುವ ಈ ಸರ್ಕಾರದ ವಿರುದ್ಧ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರೈತರು, ಮೀನುಗಾರರು ಹಾಗೂ ಸಾರ್ವಜನಿಕರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *