
ಮಂಗಳೂರು: ಸಿದ್ದರಾಮಯ್ಯ ಅವರ ಈ ಹಿಂದಿನ ಬಜೆಟ್‌ನಂತೆ ಈ ಬಜೆಟ್ ಕೂಡಾ ಕೇವಲ ಘೋಷಣೆಗೆ ಸೀಮಿತವಾದ ಹಾಗಿದೆ. ಬಜೆಟ್ ಗಾತ್ರ ಹಿಗ್ಗಿದೆ. ಜತೆಗೆ ಸಾಲದ ಹೊರೆಯೂ ಇಮ್ಮಡಿಯಾಗಿದೆ ಎಂದು ಮಾಜಿ ಸಂಸದ ಹಾಗೂ ಮಾಜಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದರು.

ಅಬಕಾರಿ ಇಲಾಖೆ ಮೂಲಕ ಸರ್ಕಾರ ಹೆಚ್ಚಿನ ರಾಜಸ್ವ ನಿರೀಕ್ಷಿಸಿರುವುದು ರಾಜ್ಯದ ಜನತೆಯ ದುರಂತ. ಸಾಲದಲ್ಲಿ ಮುಳುಗಿರುವ ಈ ಸರ್ಕಾರ ಬಜೆಟ್ ನ ಶೇ. 25ರಷ್ಟು ಘೋಷಣೆಗಳನ್ನು ಕೂಡಾ ಕಾರ್ಯಗತ ಮಾಡುವುದು ಸಾಧ್ಯವಿಲ್ಲ ಎಂದರು. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿರುವುದೇ ಬಜೆಟ್ ನ ದೊಡ್ಡ ಸಾಧನೆ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಪುತ್ತೂರು ಮೆಡಿಕಲ್ ಕಾಲೇಜಿಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ನಿರಾಶಾದಾಯಕ ಬಜೆಟ್ ಎಂದರು.



