ಕಾರವಾರ: ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೂರು ವರ್ಷಗಳ ಕಾಲ ವಿಳಂಬ ಮಾಡಿ, ಈ ಬಜೆಟ್ ನಲ್ಲಿ ಮತ್ತೆ ಘೋಷಿಸಲಾಗಿದೆ. ಆದರೆ ಜನತೆಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯ ದೊರೆತಾಗಲಷ್ಟೇ ಈ ಘೋಷಣೆ ಸಾರ್ಥಕ ಆಗಲಿದೆ. ಇದೊಂದು ಸಾಲದ ಬಜೆಟ್ ಎಂದು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಕಾರವಾರ ಹಾಗೂ ಜಿಲ್ಲೆಯ ಮಧ್ಯವರ್ತಿ ಸ್ಥಳ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಲಾಗಿತ್ತು. ಆದರೆ, ಈ ಬಜೆಟ್ ನಲ್ಲಿ ಒಂದೇ ಆಸ್ಪತ್ರೆಗೆ ಘೋಷಣೆ ಸೀಮಿತ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಮಹತ್ವದ ಕೊಡುಗೆಯೇ ಇಲ್ಲ. ಪ್ರವಾಸೋದ್ಯಮ, ಪರಿಸರ ಪೂರಕ ಕೈಗಾರಿಕೆ ಸ್ಥಾಪನೆ, ಮೀನುಗಾರಿಕೆ, ತೋಟಗಾರಿಕೆಗೆ ಪ್ರಯೋಜನ ಆಗುವ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವುದು ಸಾಲದ ಬಜೆಟ್. ರಾಜ್ಯದ ಸಾಲವನ್ನು 1.32 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಇದು ಸರ್ಕಾರ ದಿವಾಳಿ ಆಗಿರುವುದರ ಸಾಕ್ಷಿ ಆಗಿದೆ. ಇನ್ನು ಈ ಸಾಲದ ಹೊರೆ ಇಳಿಸಿಕೊಳ್ಳಲು ಜನರ ಮೇಲೆ ತೆರಿಗೆ ಭಾರ ಹೇರುವ ದಿನಗಳು ದೂರವಿಲ್ಲ ಎಂದು ಆರೋಪಿಸಿದ್ದಾರೆ.



