ಮಂಗಳೂರು: ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಸ್ಮಾರ್ಟ್ ಫೋನ್, ಮಾದಕ ದ್ರವ್ಯ, ಮದ್ಯಪಾನ ಸೇರಿದಂತೆ ಹಲವು ಕಾರಣ ಇವೆ. ಧರ್ಮಸ್ಥಳ ಗ್ರಾಮದಲ್ಲಿ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಪ್ಪ, ಜಯಮಾಲ ವರದಿ ಹಾಗೂ ಎಸ್ಐಟಿ ತನಿಖೆಯ ವರದಿ ನೀಡುವಂತೆ ಪತ್ರ ಬರೆದಿದ್ದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತೀರ್ಪಿನ ಬಳಿಕ ವರದಿ ಕೊಡಲಿದ್ದಾರೆ. ಅಲ್ಲಿವರೆಗೆ ಕಾಯೋಣ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಕಾನೂನು ಬಿಗಿ ಆಗಿದ್ದರೂ, ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಕೊಲೆಗಳು ನಡೆಯುತ್ತಿವೆ. ಧಾರವಾಡದಲ್ಲಿ ಅನ್ಯಕೋಮಿನ ಹುಡುಗನ ಜತೆ ಮದುವೆ ಆದ ಕಾರಣಕ್ಕೆ ಹೆತ್ತ ಮಗಳನ್ನೇ ಅಪ್ಪನೇ ಕೊಲ್ಲುತ್ತಾನೆ. ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಬೆಳೆಯಬೇಕು ಎಂದು ತಿಳಿಸಿದರು.

ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿ ಶೌಚಾಲಯಗಳು ಹೈಟೆಕ್ ಆಗಿವೆ. ಕುಡಿವ ನೀರು, ಪೊಲೀಸ್ ಗಸ್ತು, ಚೆಕ್ ಪೋಸ್ಟ್ ಎಲ್ಲವೂ ಚೆನ್ನಾಗಿವೆ. 21 ಸಿಸಿಟಿವಿ ಕ್ಯಾಮೆರಾಗಳೂ ಕಾರ್ಯಾಚರಿಸುತ್ತಿವೆ. ಎಲ್ಲ ಬಸ್ಗಳಲ್ಲೂ ಸಹಾಯವಾಣಿ ಸಂಖ್ಯೆ ಅಳವಡಿಸಲು ಸಲಹೆ ನೀಡಿದ್ದೇನೆ ಎಂದರು.
ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗೆ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕಾನೂನಿನ ಅರಿವು, ಜಾಗೃತಿ ಮೂಡಿಸಿ, ಅಲ್ಲಿಂದ ಸಂಗ್ರಹಿಸಿ ಮಾಹಿತಿ, ಸಮಸ್ಯೆಗಳ ವರದಿಯನ್ನು ಸಿಎಂ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸುತ್ತೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಸಿಎಂ ಅವರ ಜತೆಗೆ ಖುದ್ದು ಚರ್ಚಿಸಿ, ಡಿಸಿಗಳಿಗೆ ಕರೆ ಮಾಡಿಸಿ ಸಮಸ್ಯೆ ಪರಿಹಾರ ಮಾಡಿಸುತ್ತೇನೆ ಎಂದು ತಿಳಿಸಿದರು.
10 ಕ್ಕಿಂತ ಹೆಚ್ಚು ಮಹಿಳೆಯರ ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚನೆಯಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 78 ಸಾವಿರ ಮಂದಿ ‘ಶೀ ಬಾಕ್ಸ್’ ಪೋರ್ಟಲ್ನಲ್ಲಿ ಸಮಿತಿ ರಚಿಸಿರುವ ಬಗ್ಗೆ ಅಪ್ಲೋಡ್ ಮಾಡಿದ್ದಾರೆ. ಸಮಿತಿ ಮಾಡಿದ ಬಳಿಕ ಅನುಷ್ಠಾನ ಆಗಬೇಕು. ಮಹಿಳಾ ದೌರ್ಜನ್ಯ ನಡೆದರೆ ಶಿಕ್ಷೆ ಆಗಬೇಕು ಎಂದರು.
‘ಸಿಎಂ ಮಹಿಳಾ ಪರ ಬಜೆಟ್ ಮಂಡಿಸುವ ನಿರೀಕ್ಷೆ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ರಾಜ್ಯ ಬಜೆಟ್ ಮಹಿಳಾ ಪರ ಆಗಿರಬೇಕು. ತಾಯಿ ಮಕ್ಕಳ ಆಸ್ಪತ್ರೆ ಹೆಚ್ಚಾಗಬೇಕು. ಆಸ್ಪತ್ರೆಗಳಲ್ಲಿ ವೈದ್ಯರ ಸಹಿತ ಸೌಲಭ್ಯ ಇರಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ. ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳಾ ಹಾಸ್ಟೆಲ್, ಸುರಕ್ಷಣೆ, ಭದ್ರತೆ, ಬಸ್ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆ ಆಯೋಗದ್ದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಮೀನು ಮಾರಾಟ ಮಹಿಳೆಯರ ಕಷ್ಟ ಆಲಿಸಿದ ಅಧ್ಯಕ್ಷೆ
ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿರುವ ಮೀನು ಮಾರುಕಟ್ಟೆಗೆ ತೆರಳಿ, ಅಲ್ಲಿನ ಮೀನು ಮಾರಾಟದ ಮಹಿಳೆಯರ ಅಹವಾಲು ಆಲಿಸಿದರು. ಈ ವೇಳೆ, ಮೀನುಗಾರ ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡರಲ್ಲದೆ, ನೂತನ ಸೆಂಟ್ರಲ್ ಮಾರುಕಟ್ಟೆಗೆ ಹೋಗುವುದಿಲ್ಲ. ಅಲ್ಲಿ ದುಬಾರಿ ಬಾಡಿಗೆ ಮಾಡಿದ್ದಾರೆ. ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ಮಾಡಿಕೊಡಬೇಕು ಎಂದು ಅಹವಾಲು ಮಂಡಿಸಿದರು. ಮೀನುಗಾರ ಮಹಿಳೆಯರ ಜತೆಗೆ ಸಭೆ ಇದ್ದು, ಬಂದು ದೂರು ಕೊಟ್ಟರೆ ಸರ್ಕಾರಕ್ಕೆ ಬರೆವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.



