ಮಂಗಳೂರು: ಬರುವ ವರ್ಷದ ಒಳಗೆ ಮಂಗಳೂರು ನಗರಕ್ಕೆ ಸೀಮಿತವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 100 ಮನೆ ಒದಗಿಸಲಾಗುವುದು. ದ.ಕ. ಜಿಲ್ಲೆ ಬೆಂಗಳೂರಿನ ಬಳಿಕ 2 ನೇ ಪ್ರಮುಖ ನಗರವಾಗಿ ಬೆಳೆಯುತ್ತಿದ್ದು, ಎಲ್ಲಾ ಅವಕಾಶಗಳು ಇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಇಲ್ಲಿನ ಅತ್ತಾವರ ಪೊಲೀಸ್ ಲೇನ್‌ನಲ್ಲಿ ಮಂಗಳವಾರ ಮೂಡಬಿದಿರೆ ಪೊಲೀಸ್ ಠಾಣೆ ಸಿಬ್ಬಂದಿಗೆ ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಮಂಗಳೂರು ನಗರ ಮತ್ತು ದ.ಕ. ಜಿಲ್ಲಾ ಪೊಲೀಸ್ ಅಧಿಕಾರಿ- ಸಿಬ್ಬಂದಿ ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 1.10 ಲಕ್ಷ ಪೊಲೀಸ್ ಅಧಿಕಾರಿ ಸಿಬ್ಬಂದಿ ಇದ್ದಾರೆ. ಶೇ 40 ರಷ್ಟು ಮಂದಿಗೆ ನೂತನ ವಸತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಪೊಲೀಸರಲ್ಲಿ ಆತ್ಮಸ್ಥೈರ್ಯ, ನಂಬಿಕೆ, ವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. 2030 ರೊಳಗೆ ಎಲ್ಲರಿಗೂ ವಸತಿಗೃಹಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಪೊಲೀಸ್ ಇಲಾಖೆ ಸುವ್ಯವಸ್ಥಿತ ಆಗಿದ್ದರೆ ಸಮಾಜ ಅಭಿವೃದ್ಧಿ ಆಗುತ್ತದೆ ಎನ್ನುವ ಮನೋಭಾವದಿಂದ 2015 ರಲ್ಲಿ ಈ ವಸತಿ ಯೋಜನೆಯನ್ನು ಆರಂಭಿಸಲಾಗಿದ್ದು, ಆರಂಭದಲ್ಲಿ ಒಂದು ವಸತಿ ವೆಚ್ಚ 18 ಲಕ್ಷ ರೂ.ಗಳಿದ್ದು ಈಗ 33 ಲಕ್ಷ ರೂ.ಗಳಿಗೆ ಏರಿಕೆ ಆಗಿದೆ ಎಂದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ 2 ನೇ ಸ್ಥಾನದಲ್ಲಿದೆ. ಇದಕ್ಕೆ ಪೊಲೀಸ್ ಇಲಾಖೆಯ ಕೊಡುಗೆ ಕಾರಣ. ದ.ಕ. ಜಿಲ್ಲೆಯೂ ಬೆಂಗಳೂರಿನ ಬಳಿಕ 2ನೆ ಪ್ರಮುಖ ನಗರವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯ, ಅವಕಾಶಗಳನ್ನು ಹೊಂದಿದೆ. ಆದರೆ ಕೆಲ ಸಮಯದ ಹಿಂದೆ ಇಲ್ಲಿನ ಸೌಹಾರ್ದ ವಾತಾವರಣಕ್ಕೆ ಧಕ್ಕೆ ಉಂಟಾಗಿತ್ತು. ಇದೀಗ ಅವೆಲ್ಲವೂ ಬದಲಾಗಿ ಗತಕಾಲದ ವೈಭವ ಮರುಕಳಿಸುತ್ತಿದೆ ಎಂದರು.
ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ದಿಸೆಯಲ್ಲಿ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿಯೂ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳು ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳ ಜತೆ ನಡೆಸಲಾದ ಪರಿಶೀಲನೆಯ ಸಂದರ್ಭ ಡ್ರಗ್ಸ್ ಪ್ರಕರಣ, ಪೂರೈಕೆ ಪ್ರಮಾಣ ಸಾಕಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಕಾಲೇಜು ಆಡಳಿತ ಮಂಡಳಿಗಳ ಸಹಕಾರದ ಜತೆಗೆ ಡ್ರಗ್ಸ್ ಸೇವನೆ ಬಗ್ಗೆ ವಿದ್ಯಾರ್ಥಿಗಳ ತಪಾಸಣೆ ಕಾರ್ಯದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಡ್ರಗ್ಸ್ ನಿಯಂತ್ರಣದಲ್ಲಿ ಪೋಷಕರು ಕೂಡಾ ಮನಸ್ಸು ಮಾಡಿದರೆ ಮಕ್ಕಳನ್ನು ನಿಯಂತ್ರಣದಲ್ಲಿರಿಸಿಕೊಂಡು ಈ ಪಿಡುಗಿನಿಂದ ಸಮಾಜವನ್ನು ಮುಕ್ತಗೊಳಿಸಲು ಸಾಧ್ಯವಾಗಲಿದೆ ಎಂ ದರು.

ಮಂಗಳೂರಿನಲ್ಲಿ ಎರಡು ಹೊಸ ಪೊಲೀಸ್ ಠಾಣೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಆಗಿದೆ. ಹೊಸ ಠಾಣೆ ಮಂಜೂರಾತಿಗೆ ಕೇಂದ್ರ ಸರಕಾರ ಕೆಲವೊಂದು ನಿಯಮಗಳನ್ನು ಅನಸುರಿಸಿ ಹೊಸ ಠಾಣೆಗಳಿಗೆ ಮಂಜೂರಾತಿ ದೊರೆಯಬೇಕಿದೆ. ಹಳೆ ಕಟ್ಟಡಗಳ ಬದಲಿಗೆ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಕರಾವಳಿ ಭದ್ರತಾ ಪಡೆಯ 15 ಬೋಟ್‌ಗಳಲ್ಲಿ ಮೂರ್ನಾಲ್ಕು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆಯೂ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನಗರದ ಎರಡು ಪೊಲೀಸ್ ಠಾಣೆಗಳು ಬಾಡಿಗೆ ಕಟ್ಟಡದಲ್ಲಿವೆ. ಬಂದರು ಪೊಲೀಸ್ ಠಾಣೆ ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣವಾಗಿದ್ದು, ಇದನ್ನು ಹೊಸತಾಗಿ ನಿರ್ಮಾಣ ಮಾಡಬೇಕಾಗಿದೆ. ನಗರ ಭಾಗದ ಜೈಲ ಅನ್ನು ಶೀಘ್ರ ಸ್ಥಳಾಂತರಿಸುವ ಮೂಲಕ ಸಮಸ್ಯೆಯನ್ನು ನಿವಾರಿಸಬೇಕು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂಬ ಬೇಡಿಕೆ ಸಲ್ಲಿಸಿದರಲ್ಲದೆ, ಕರಾವಳಿ ಕಾವಲು ಪಡೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ತಾನು ವರದಿಯೊಂದನ್ನು ತಯಾರಿಸಿದ್ದು, ಅದನ್ನು ಶೀಘ್ರವೇ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಸ್ಟ್ಯಾನಿ ಅಲ್ವಾರಿಸ್, ಎಂ.ಎ. ಗಫೂರ್, ಶಾಹೀದ್ ತೆಕ್ಕಿಲ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ವಿಶೇಷ ಕಾರ್ಯಪಡೆಯ ಐಜಿಪಿ ಪ್ರಕಾಶ್ ಗೌಡ, ಗೃಹ ಇಲಾಖೆಯ ಎಂಜಿನಿಯರ್ ವೀರಭದ್ರಪ್ಪ, ಡಿಸಿಪಿ ರವಿಶಂಕರ್ ಇದ್ದರು. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ವಾಗತಿಸಿದರು. ಡಿಸಿಪಿ ಮಿಥುನ್ ವಂದಿಸಿದರು.
ಶೀಘ್ರವೇ ಜೈಲು ಶಿಫ್ಟ್: ಸಚಿವ ಪರಮೇಶ್ವರ್
ಮಂಗಳೂರು ನಗರ ಹೃದಯ ಭಾಗದಲ್ಲಿರುವ ಜೈಲಿನಿಂದ ಸಾಕಷ್ಟು ಸಮಸ್ಯೆ ಆಗುತ್ತಿರುವ ಬಗ್ಗೆ ಗಮನದಲ್ಲಿದೆ. ಬಜೆಟ್ ಚರ್ಚೆ ವೇಳೆ ಮುಖ್ಯಮಂತ್ರಿ ಅವರಿಗೆ ನನ್ನ ಪ್ರಥಮ ಬೇಡಿಕೆಯೇ ಮಂಗಳೂರು ಜೈಲು ಸ್ಥಳಾಂತರದ ಬಗ್ಗೆ ಆಗಿತ್ತು. ಮುಡಿಪುವಿನ ನಿರ್ಮಾಣ ಹಂತದಲ್ಲಿರುವ ಜೈಲು ಆವರಣದಲ್ಲಿ ಬ್ಯಾರಕ್‌ಗಳ ನಿರ್ಮಾಣವಾಗಿದ್ದು, ಸುತ್ತಲೂ ಸುಭದ್ರ ಆವರಣ ಗೋಡೆ, ಗೇಟ್ ಹಾಗೂ ಇತರ ಭದ್ರತಾ ವ್ಯವಸ್ಥೆಗಳಿಗೆ 120 ಕೋಟಿ ರೂ.ಗಳ ಅಗತ್ಯವಿದೆ. ತುರ್ತು ಕಾಮಗಾರಿಗಳನ್ನು ಕೈಗೊಂಡು ನಗರದಿಂದ ಹೊರವಲಯಕ್ಕೆ ಜೈಲು ಸ್ಥಳಾಂತಕ್ಕೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲಾಗಿದ್ದು, ಹಣ ಒದಗಿಸುವ ವಿಶ್ವಾಸ ಇದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದರು.



