
ಮಂಗಳೂರು: ಇದೇ 9 ರಿಂದ 12 ರವರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನರೇಗಾ ಹೆಸರು ಬದಲಾಯಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದಿಂದ ಮೂಲ್ಕಿವರೆಗೆ 4 ದಿನಗಳ ಕಾಲ 100 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಜನರ ಖಾತರಿ ಉದ್ಯೋಗಕ್ಕೆ ಕತ್ತರಿ ಹಾಕಿರುವ ಬಿಜೆಪಿ ನಡೆಯನ್ನು ಖಂಡಿಸಿ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಮನರೇಗಾ ಯೋಜನೆಯ ಮೂಲ ಸ್ವರೂಪವನ್ನೇ ಬದಲಾವಣೆ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ. ಇಂತಹ ವಿಶಿಷ್ಟ ಯೋಜನೆಗೆ ಕೇಂದ್ರ ಬಿಜೆಪಿ ಸರಕಾರ ಕೊಕ್ಕೆ ಹಾಕಿದೆ. ಬಡವರ ಗ್ಯಾರಂಟಿ ಉದ್ಯೋಗದ ಮೇಲೆ ಬರೆ ಎಳೆದಿದೆ. ಇದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಕೇಂದ್ರದ ವಿರುದ್ಧ ಜನಾಂದೋಲನ ರೂಪಿಸುವ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಪಾದಯಾತ್ರೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಫೆ. 9 ರಂದು ಬೆಳಿಗ್ಗೆ 8.30 ಗಂಟೆಗೆ ಸುಳ್ಯದ ಗಾಂಧಿನಗರದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಸುಳ್ಯದ ಗಾಂಧಿನಗರದಿಂದ ಪುತ್ತೂರಿನ ಕುಂಬ್ರ ಜಂಕ್ಷನ್‌ವರೆಗೆ ಪಾದಯಾತ್ರೆ ನಡೆಯಲಿದ್ದು, ಸುಮಾರು 25 ಕಿಲೋ ಮೀಟರ್ ನಡೆಗೆ ನಡೆಸಲಾಗುವುದು. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಫೆ.10 ರಂದು ಕುಂಬ್ರ- ಮಾಣಿ, ಫೆ 11 ರಂದು ಕಲ್ಲಡ್ಕ- ಫರಂಗಿಪೇಟೆ, ಫೆ 12 ರಂದು ಮಂಗಳೂರಿನ ಲಾಲ್‌ಬಾಗ್‌ನಿಂದ ಮೂಲ್ಕಿವರೆಗೆ ಪಾದಯಾತ್ರೆ ನಡೆಯಲಿದ್ದು, ಒಟ್ಟು 100 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು ಮಾತನಾಡಿ, ಕೇಂದ್ರ ಸರಕಾರ ಸರಿಯಾದ ರೀತಿಯಲ್ಲಿ ರಾಜ್ಯಗಳ ಜತೆಗೆ ಚರ್ಚೆಮಾಡದೇ ತರಾತುರಿಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಜನಪ್ರಿಯ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆಸುವುದು ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿ ಸುವುದೇ ಕೇಂದ್ರ ಸರಕಾರದ ಉದ್ದೇಶ. ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಜೆಆರ್ ಲೋಬೊ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಶುಭೋದಯ ಆಳ್ವ, ನವಾಜ್, ಸುಹಾನ್ ಆಳ್ವ ಸೇರಿದಂತೆ ಹಲವರು ಇದ್ದರು.
12 ರಂದು ಮೂಲ್ಕಿಯಲ್ಲಿ ಸಮಾವೇಶ: ಹರೀಶ್ ಕುಮಾರ್
ಪ್ರತಿ ದಿನ 25 ರಿಂದ 28 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಉಪಹಾರ ಮುಗಿಸಿ, 8.30 ಗಂಟೆಗೆ ಪಾದಯಾತ್ರೆ ಆರಂಭಿಸಲಾಗುವುದು. ಮಧ್ಯಾಹ್ನ 2 ಗಂಟೆ ಭೋಜನದ ನಂತರ ಸಂಜೆ 6 ಗಂಟೆವರೆಗೆ ಮುಂದುವರೆಯಲಿದೆ. ಪ್ರತಿ ದಿನ ಪಾದಯಾತ್ರೆಯ ಕೊನೆಯಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಫೆ. 9 ರಂದು ಕುಂಬ್ರ, ಫೆ.10 ರಂದು ಮಾಣಿ, ಫೆ.11 ರಂದು ಫರಂಗಿಪೇಟೆ, ಫೆ.12 ರಂದು ಮೂಲ್ಕಿಯಲ್ಲಿ ಸಮಾವೇಶ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಮೂಲಕ ಜನರಿಗೆ ಕೇಂದ್ರ ಸರಕಾರ ಮಾಡಿರುವ ಮೋಸವನ್ನು ಮನವರಿಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರು ತಿಳಿಸಿದರು.


