
ಮಂಗಳೂರು: ಇಲ್ಲಿನ ಖ್ಯಾತ ಹೋಮಿಯೋಪಥಿ ವೈದ್ಯ ಹಾಗೂ ಸಮಾಜಮುಖಿ ಆರೋಗ್ಯ ಕಾರ್ಯಕರ್ತ ಡಾ. ಪ್ರವೀಣ್ ಕುಮಾರ್ ರೈ ಅವರಿಗೆ ಆಯುಷ್ ಹಬ್ಬ 2026 ರ ಅಂಗವಾಗಿ ಪ್ರತಿಷ್ಠಿತ ಆಯುಷ್ ಯುವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಗತಿಪರ ಕೃಷಿಕ ಹಾಗೂ ಸಮಾಜಮುಖಿ ಮುಂದಾಳು ಆಗಿದ್ದ ಕೊಳ್ತಿಗೆ ಗ್ರಾಮದ ದಿವಂಗತ ಪಾಂಬಾರು ಸುಬ್ಬಣ್ಣ ರೈ ಹಾಗೂ ಹೇಮಾವತಿ ಎಸ್. ರೈ ದಂಪತಿ ಪುತ್ರ ಡಾ. ಪ್ರವೀಣ್ ಕುಮಾರ್ ರೈ ಅವರು, ಆರೋಗ್ಯಕರ ಜಗತ್ತಿಗಾಗಿ ಹೋಮಿಯೋಪಥಿ ಎಂಬ ಧ್ಯೇಯದ ಜತೆಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಕಟ್ಟ ಕಡೆಯ ಸ್ತರದ ಜನರಿಗೂ ತಲುಪಿಸುವ ಉದ್ದೇಶದಿಂದ 16 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರಿನ ಬೆಂದೂರವೆಲ್ ನ ಡಾ. ರೈ ಹೋಮಿಯೋಪಥಿ ಸೆಂಟರ್ ನಲ್ಲಿ ಮುಖ್ಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು, ದೂರದ ಕಾರವಾರದಲ್ಲಿ ಕೂಡ ಶಾಖೆ ಹೊಂದಿದ್ದಾರೆ. ಹುಟ್ಟೂರು ಪುತ್ತೂರಿ ಸಿಟಿ ಆಸ್ಪತ್ರೆಯಲ್ಲಿ ಪ್ರತೀ ತಿಂಗಳ 4ನೇ ಶನಿವಾರದಂದು 10 ವರ್ಷದಿಂದ ನಿಯಮಿತವಾಗಿ ಸಲಹಾ ಸೇವೆ ನೀಡುತ್ತಿದ್ದು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ನಿರಂತರ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಈ ಮಾನವೀಯ ಸೇವಾ ಪಯಣದಲ್ಲಿ ಅವರು ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಿ ಸಮಾಜಮುಖಿ ಸೇವೆಯಲ್ಲಿ ವಿಶಿಷ್ಟ ಗುರುತ ಅನ್ನು ಮೂಡಿಸಿದ್ದಾರೆ.

ಡಾ. ಪ್ರವೀಣ್ ಕುಮಾರ್ ರೈ ಅವರು ಹೊಮಿಯೋಪಥಿಯಲ್ಲಿ ಎಂಡಿ ಪದವೀಧರರಾಗಿದ್ದು, ವೈದ್ಯಕೀಯ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಕರ್ನಾಟಕ ಬೋರ್ಡ್ ಆಫ್ ಹೋಮಿಯೋಪಥಿಕ್ ಸಿಸ್ಟಮ್ ಆಫ್ ಮೆಡಿಸಿನ್ ಚುನಾಯಿತ ನಿರ್ದೇಶಕರಾಗಿ, ಇಂಡಿಯನ್ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಐಎಚ್ ಎಂಎ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಕುಡ್ಲ ಹೋಮಿಯೊಕಾನ್ 24 ರ ರಾಷ್ಟ್ರ ಮಟ್ಟದ ಹೋಮಿಯೋಪಥಿ ಸಮ್ಮೇಳನದ ಕಾನ್ಫರೆನ್ಸ್ ಡೈರೆಕ್ಟರ್ ಆಗಿ, ಡಿಕೋಡ್ – 2019 ರಾಷ್ಟ್ರ ಮಟ್ಟದ ಸಮ್ಮೇಳನದ ಕಾನ್ಫರೆನ್ಸ್ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು. ಕೋವಿಡ್-19 ಅವಧಿಯಲ್ಲಿ ಹೋಮಿಯೋಪಥಿ ವೈದ್ಯಕೀಯ ಸಂಘದ ಜೊತೆಗೂಡಿ 80,000 ಕ್ಕೂ ಹೆಚ್ಚು ಜನರಿಗೆ ಹೋಮಿಯೋಪಥಿಕ್ ಇಮ್ಯುನಿಟಿ ಬೂಸ್ಟರ್ ವಿತರಿಸುವ ಮೂಲಕ ಅವರು ಸಮಾಜಮುಖಿ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರೆಡಿಯೋ, ದೂರದರ್ಶನ ಚಾನೆಲ್ಗಳು ಹಾಗೂ ದಿನಪತ್ರಿಕೆಗಳ ಮೂಲಕ ಸಂದರ್ಶನಗಳನ್ನು ನೀಡಿ ಹಾಗೂ ಆರೋಗ್ಯ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿಗೆ ಅವರು ನಿರಂತರವಾಗಿ ಕೊಡುಗೆ ನೀಡುತ್ತಿದ್ದು, ಉಚಿತ ಆರೋಗ್ಯ ಶಿಬಿರಗಳು, ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಉಪನ್ಯಾಸಗಳ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣ ತಲುಪಿಸುತ್ತಿದ್ದಾರೆ.
ಡಾ. ಪ್ರವೀಣ್ ಕುಮಾರ್ ರೈ ಅವರಿಗೆ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆಯುಷ್ ವಿಭೂಷಣ ಡಾ.ಎಂ. ಮೋಹನ್ ಆಳ್ವ ಆಯುಷ್ ಯುವಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. , ಸಮಗ್ರ ಆಯುಷ್ ಆರೋಗ್ಯ ಸೇವೆ, ವೃತ್ತಿಪರ ನಿಷ್ಠೆ ಹಾಗೂ ಮಾನವೀಯ ಸೇವೆಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನನ್ಯ ಕೊಡುಗೆಗೆ ದೊರೆತ ಮಹತ್ವದ ಗೌರವವಾಗಿದೆ.
ಸ್ಪೀಕರ್ ಡಾ. ಯು. ಟಿ. ಖಾದರ್ ಉಪಸ್ಥಿತಿಯೊಂದಿಗೆ, ಆಯುಷ್ ಹಬ್ಬ’26 ರ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ಅಧ್ಯಕ್ಷ ಡಾ. ಕೇಶವ ಪಿ.ಕೆ ,ಸಂಘಟನಾ ಕಾರ್ಯದರ್ಶಿ ಡಾ. ಸಚಿನ್ ನಡ್ಕ, ಎಸ್ ಡಿ ಎಂ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಬಂಟ ಯಾನೆ ನಾಡವರ ಸಂಘದ ಅಧ್ಯಕ್ಷ ಶ್ರಿ ಅಜಿತ್ ಕುಮಾರ್ ರೈ ಮಾಲಾಡಿ ಇದ್ದರು.


