
ಕಾರವಾರ( ಬಿಣಗಾ): ಉತ್ತರ ಕನ್ನಡ ಜಿಲ್ಲೆಯ ಕಾರವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಡಾಂಬರ್ ಹೊತ್ತು ಸಾಗುತ್ತಿದ್ದ ಟ್ಯಾಂಕರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರಂತ ಸಾವು ಕಂಡ ಘಟನೆ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ಹೊರಟಿದ್ದ ಡಾಂಬರ್ ಟ್ಯಾಂಕರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ತಲೆಯ ಮೇಲೆ ಹರಿದ ಪರಿಣಾಮ ಕಾರವಾರದ ಡಿಡಿಪಿಐ ಕಚೇರಿಯಲ್ಲಿ ಗುಮಾಸ್ತನಾಗಿದ್ದ ದಿನಕರ್ ಗುನಗಿ ಸ್ಥಳದಲ್ಲಿಯೇ ಸಾವಿಗಿಡಗಿದ್ದಾರೆ.
ಬಿಣಗಾದಲ್ಲಿ ಜಾತ್ರೆ ನಡೆಯುತ್ತಿರುವುದರಿಂದ ದಿನಕರ್ ಗುನಗಿ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟ್ಯಾಂಕರ್ ಚಾಲಕ ಘಟನೆ ನಡೆಯುತ್ತಿದ್ದಂತೆ ಪರಾರಿ ಆಗಿದ್ದ, ಆದರೆ ಕಾರವಾರ ಸಂಚಾರ ಪೊಲೀಸರು ಆತನನ್ನ ವಶಕ್ಕೆ ಪಡೆದು ಬಂಧನ ಮಾಡಿದ್ದಾರೆ.
ಘಟನೆ ಕುರಿತು ಕಾರವಾರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ ಸಂಚಾರ ಠಾಣೆಯ ಪಿಎಸ್ ಐ ಶ್ರೀಕಾಂತ್ ರಾಥೋಡ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿಯೇ ಇದ್ದು ಅಂಬುಲೆನ್ಸ್ ಮೂಲಕ ಶವವ ಆಸ್ಪತ್ರೆಗೆ ಸಾಗಿಸಿದರು.
ಜನರ ಆಕ್ರೋಶ: ಇಲ್ಲಿನ ಟನಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಲಾಗುತ್ತಿದ್ದು, ವೇಗ ಮೀತಿಗೆ ಕಡಿವಾಣ ಇಲ್ಲದೇ ವಾಹನಗಳ ಸಂಚಾರ ಮಾಡುತ್ತಿದ್ದು, ಬೈಕ್ ಸವಾರರು ಸವಾರಿ ಮಾಡುವುದಕ್ಕೆ ಭಯ ಭೀತರಾಗುವಂತಹ ಸ್ಥಿತಿ ಇದೆ. ಟ್ಯಾಂಕರ್ ಲಾರಿಗಳು ಹಾಗೂ ಭಾರಿ ವಾಹನಗಳ ವೇಗಕ್ಕೆ ಕಡಿವಾಣವೇ ಇಲ್ಲದಂತೆ ಆಗಿದೆ. ಈ ಹಿಂದೇ ಕೂಡ ಬಿಣಗಾದಲ್ಲಿ ಬೈಕ್ ವೊಂದ ಅಪಘಾತ ಸಂಭವಿಸಿದಾಗ ಮಗು ಹಾಗೂ ತಂದೆ ಕೂಡ ಭೀಕರವಾಗಿ ಸಾವು ಕಂಡಿದ್ದರು. ಈ ಬಗ್ಗೆ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


