
ಮಂಗಳೂರು: ಕದ್ರಿ ಮಂಜುನಾಥ ಜಾತ್ರಾ ಮಹೋತ್ಸವ ರಥೋತ್ಸವದ ಪುಣ್ಯ ದಿನ ಪ್ರಖ್ಯಾತ ಹರಿದಾಸರು, ಸಂಘಟಕರು, ಭಜನಾ ಕೀರ್ತನಕಾರರು , ನಿರೂಪಕರು ಮತ್ತು ಅಂಕಣ ಬರಹಗಾರರಾದ ಶರತ್ ಶೆಟ್ಟಿ ಪಡುಪಳ್ಳಿ ಅವರ ತುಳು ಬರಹಗಳ ಗುಚ್ಚ “ ಕಡ್ಲೆ ಬಜಿಲ್” ಎಂಬ ಪುಸ್ತಕವು ಕದ್ರಿ ದೇವಳದಲ್ಲಿ ಬಿಡುಗಡೆ ಆಯಿತು.
ಮಲ್ಲಿಕಾ ಕಲಾ ವೃಂದದ ಸಂಚಾಲಕ ಸುಧಾಕರ್ ರಾವ್ ಪೇಜಾವರ, ಹಿರಿಯ ಲೇಖಕಿ, ಲೇಖಕಿಯರ ವಾಚಕಿಯರ ಸಂಘದ ರೂಪಕಲಾ ಆಳ್ವ, ಪ್ರಸಿದ್ಧ ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ತುಳು ಬರಹದ ಪುಸ್ತಕಕ್ಕೆ ಮುನ್ನುಡಿ ಬರೆದ ರೂಪಕಲಾ ಆಳ್ವ ಅವರು ಇದರಲ್ಲಿನ ಲೇಖನಗಳ ಬಗ್ಗೆ ಮಾತನಾಡಿ, ಇದು ನಮ್ಮ ತುಳುವರ ದಿನನಿತ್ಯದ ಕಷ್ಟ ಸುಖಗಳ ಬಗೆಗೆ, ಹಬ್ಬ ಹರಿದಿನಗಳ ಬಗೆಗೆ, ಊರಿನ ಜಾತ್ರೆ ಸಡಗರಗಳ ಬಗೆಗೆ ಮತ್ತು ಹಿಂದೆ ಕಳೆದ ಬಾಲ್ಯದ ಬಗೆಗಿನ ನೆನಪು ಹುಟ್ಟಿಸುವ ಉತ್ತಮ ವಿಚಾರಗಳನ್ನು ಹೊಂದಿದ ಒಂದು ಸಮಗ್ರ ಲೇಖನ ಮಾಲೆ. ಹಾಗಾಗಿ ಆಸಕ್ತರು ಖರೀದಿಸಿ ಓದಿದರೆ ಹಿಂದಿನ “ಕಡ್ಲೆಬಜಿಲ್” ಸವಿದ ರುಚಿ ನೀಡುವುದು ಗ್ಯಾರಂಟಿ ಎಂದರು.
ಸುಧಾಕರ್ ರಾವ್ ಮಾತನಾಡಿ ಶರತ್ ಶೆಟ್ಟಿ ಅವರ ಹರಿಕಥೆಯಂತೆ ಈ ಪುಸ್ತಕವೂ ಲೋಕನೀತಿಯ ವಿಚಾರಗಳ ಒಂದು ಗುಚ್ಚ ಎಂದು ವಿವರಿಸಿ ಶುಭ ಹಾರೈಸಿದರು.
ಶರತ್ ಶೆಟ್ಟಿ ವಂದಿಸಿದರು.


