
ಕಾರವಾರ: ಇಲ್ಲಿನ ಸಂತ್ ಜೋಸೆಫ್ ಅನುದಾನಿತ ಪ್ರೌಢಶಾಲೆ ಕಟ್ಟಡವು ಸಂಪೂರ್ಣ ಹಾಳಾಗಿದ್ದು, ಯಾವುದೇ ಸಮಯದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಹಿನ್ನಲೆಯಲ್ಲಿ ಆತಂಕಗೊಂಡಿದ್ದರು. ಇಂತಹ ಬಳಕೆಗೆ ಬಾರದ ಕಟ್ಟಡದಲ್ಲಿಯೇ ಶಾಲಾ ಆಡಳಿತ ಮಂಡಳಿಯವರು ತರಗತಿಗ ನಡೆಸುತ್ತಿರುವುದನ್ನು ಕಂಡು ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ದಿವ್ಯಶ್ರೀ ಅವರು ದಿಡೀರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆ ಹಾಗೂ ತರಗತಿಗಳ ಅವ್ಯವಸ್ಥೆ ಕಂಡು ಕೋಪಗೊಂಡ ಮಕ್ಕಳ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು, ಶಾಲೆಯ ಮುಖ್ಯ ಶಿಕ್ಷಕ ಜಾನ್ ವಿಲ್ಸನ್ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಬೇರೆಡೆಗೆ ಸ್ಥಳಾಂತರ ಮಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆದೇಶಿಸಿದರು.
ಶಾಲೆಯ ಕಟ್ಟಡದ ಗೋಡೆಗಳು ಬಿರುಕು ಬಿದ್ದಿವೆ, ಯಾಕೇ ಇಂತಹ ಅವ್ಯವಸ್ಥೆಯ ನಡುವೆ ತರಗತಿಗಳನ್ನು ನಡೆಸುತ್ತಿದ್ದೀರಿ. ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಕ್ಕೆ ಬೇರೆ ಯಾವ ಸಮಸ್ಯೆ ಇದೆ. ಕೂಡಲೇ ತರಗತಿಗಳನ್ನು ಸ್ಥಳಾಂತರ ಮಾಡದೇ ಇದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಜಾನ್ ವಿಲ್ಸನ್ ಅವರು ಈ ಬಗ್ಗೆ ಮಾಹಿತಿ ನೀಡಿ, ತರಗತಿಗಳ ಸ್ಥಳಾಂತರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಾರಿಕೆ ಉತ್ತರ ನೀಡಿದರು.

ಮುಖ್ಯ ಶಿಕ್ಷಕರ ಉತ್ತರ ನೀಡುತ್ತಿದ್ದಂತೆ ಕೋಪಗೊಂಡ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಅವರು, ಶುಕ್ರವಾರವೇ ಎಲ್ಲ ತರಗತಿಗಳನ್ನು ಸ್ಥಳಾಂತರ ಮಾಡಬೇಕು. ಬೇರೆ ಕಟ್ಟಡದಲ್ಲಿ ತರಗತಿಗಳನ್ನು ನಡೆಸಬೇಕು ಎಂದು ತಾಕೀತು ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ. ಎಂ ಅವರು ಶಾಲಾ ಕಟ್ಟಡ ಪರಿಶೀಲಿಸಿ ಅವ್ಯವಸ್ಥೆ ಮತ್ತು ಅಶಿಸ್ತಿನ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದರು.
ಶಾಲೆಯ ಅವ್ಯವಸ್ಥೆಯ ಬಗ್ಗೆ ನ್ಯಾಯಾಧೀಶರು ಶಾಲೆಯ ಮಕ್ಕಳನ್ನು ವಿಚಾರಿಸಿದರು. ಶಾಲೆಯಲ್ಲಿ ಶೌಚಾಲಯ ಸರಿಯಾಗಿಲ್ಲ. ಸಿಮೆಂಟ್ ಪದರಗಳು ಮೈಮೇಲೆ ಬೀಳುತ್ತಿವೆ ಎಂದು ದೂರಿದರು.
ಶಾಲೆಯ ವಾತಾವರಣ ಮಕ್ಕಳ ಕಲಿಕೆಗೆ ಪೂರಕ ಆಗಿರಬೇಕು. ಶಾಲೆಯ ತರಗತಿಗಳನ್ನು ಸ್ವಚ್ಛವಾಗಿ ಇಟ್ಟಿಲ್ಲ, ಕುಸಿದು ಬೀಳುವ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿದ್ದೀರಿ. ಇಂತಹ ಅಶಿಸ್ತಿನ ವರ್ತನೆಯನ್ನು ಯಾವುದೇ ಕಾರಣಕ್ಕೆ ಸಹಿಸಲ್ಲ. ಕೂಡಲೇ ಶಾಲೆಯ ತರಗತಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.
ಮುಖ್ಯ ಶಿಕ್ಷಕ ಜಾನ್ ವಿಲ್ಸನ್ ಅವರು ಇದೇ 26 ರಂದು ತರಗತಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಉತ್ತರ ನೀಡಿದರು.
ಈ ವೇಳೆ ಡಿಡಿಪಿಐ ಲತಾ ನಾಯಕ, ಬಿಇಓ ಉಮೇಶ ನಾಯ್ಕ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಮಹೇಶ, ಕುಮಾರ್, ಅಗ್ನಿಶಾಮಕ ದಳದ ಠಾಣಾಧಿಕಾರಿ ಮಹಾಬಲೇಶ್ವರ ಗೌಡ, ಸಿಬ್ಬಂದಿ ನಾಗರಾಜ ನಾಯ್ಕ, ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್ ಇದ್ದರು.


