
ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಮಾಜಿ ಶಾಸಕ ವಿ. ಎಸ್ ಪಾಟೀಲ ಮತ್ತು ಬಿಜೆಪಿ ಮುಖಂಡರಾದ ಅನಂತಮೂರ್ತಿ ಹೆಗಡೆ ಸಿರಸಿ ಅವರ ನೇತೃತ್ವದ ನಿಯೋಗ ಸಚಿವ ಎಂ. ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲೋನಿಯನ್ನು ‘ವಿಶೇಷ ಕೈಗಾರಿಕಾ ಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯ’ ಎಂದು ಘೋಷಿಸುವಂತೆ ಮನವಿ ಸಲ್ಲಿಸಿತು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ 300 ಎಕರೆಗೂ ಹೆಚ್ಚಿನ ಭೂಮಿಯು ಲಭ್ಯವಿದ್ದು, ಇದು ಮೂಲತಃ ಬೇಡ್ತಿ ಯೋಜನೆಗಾಗಿ ಕೆ.ಪಿ.ಸಿಗೆ ಕಾಲೋನಿ ನಿರ್ಮಾಣ ಮಾಡಲು ರೂಪಿಸಿದ್ದು ನಿರ್ಜನ ಆಗಿದೆ, ಆಗ ನಿರ್ಮಿಸಿದ್ದ ಮನೆಗಳು ಸಂಪೂರ್ಣ ಹಾಳಾಗಿವೆ. ಆ ಜಾಗವನ್ನು ಫಾರೆಸ್ಟ್ ಇಲಾಖೆಯಿಂದ ಮರಳಿ ಪಡೆದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮುಖಾಂತರ ಟೆಕ್ ಪಾರ್ಕ್ / ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣ ಮಾಡಿದರೇ ಯುವಕರು ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಮಾಗೋಡು ಕಾಲೋನಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಕೇವಲ 75 ಕಿಲೋ ಮೀಟರ್ ಅಂತರದಲ್ಲಿದೆ. ಹುಬ್ಬಳ್ಳಿ- ಅಂಕೋಲಾ ರೇಲ್ವೆ ಯೋಜನೆಯು ಇದರ ಸಮೀಪವೇ ನಡೆಯಲಿದೆ. ಅಂಕೋಲಾ – ಗುತ್ತಿ(ಆಂಧ್ರಪ್ರದೇಶ) ರಾಷ್ಟ್ರೀಯ ಹೆದ್ದಾರಿ 53 ಈ ಕಾಲೋನಿ ಸಮೀಪದಲ್ಲಿದೆ. ಖಾನಾಪುರ-ಹಳಿಯಾಳ-ಯಲ್ಲಾಪುರ-ಸಿರಸಿ – ಭಟ್ಕಳ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಚಾಲ್ತಿಯಲ್ಲಿದೆ. ಇಂತಹ ಸಮಗ್ರ ಸಂಪರ್ಕ ಹೊಂದಿರುವ ಮಾಗೋಡಿನ ಹವಾಮಾನ ಅತ್ಯುತ್ತಮ ಆಗಿದೆ. ಇದು ಊಟಿ-ಕೊಡೈಕೆನಾಲ್-ಡೆಹ್ರಾಡೂನ್ ಗಳಂತಹ ಸುಂದರ ಪ್ರದೇಶ ಆಗಿದೆ. ಸಮೃದ್ಧ ನೀರಿದೆ. ಸಾಂಸ್ಕೃತಿಕವಾಗಿ ಸಂಪನ್ನವಾದ ಊರುಗಳು ಆಸುಪಾಸಿನಲ್ಲಿವೆ. ಆದ್ದರಿಂದ ಈ ಮಾಗೋಡು ಪ್ರದೇಶವನ್ನು ವಿಶೇಷ ಆರ್ಥಿಕ ವಲಯ ಅಥವಾ ವಿಶೇಷ ಔದ್ಯೋಗಿಕ ವಲಯ ಎಂದು ಘೋಷಿಸುವ ಮೂಲಕ ಆ ಭಾಗದ ಪ್ರತಿಭಾವಂತ ಯುವ ಜನಾಂಗದ ಐಟಿ,ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನಿಗಳಾಗುವ ಕನಸನ್ನು ನನಸು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡವು ಬೃಹತ್ ಯೋಜನೆಗಳಿಗೆ ತ್ಯಾಗ ಮಾಡಿದ್ದಲ್ಲದೇ ಅಡಿಕೆ, ಮತ್ಸ್ಯೋದ್ಯಮದಿಂದ ಸಾವಿರಾರು ಕೋಟಿ ರೂಪಾಯಿ ತೆರಿಗೆಯನ್ನು ನೀಡುತ್ತಿದೆ. ಯಾಲಕ್ಕಿ ಕಾಳುಮೆಣಸು, ಶುಂಠಿ ಮೊದಲಾದ ಸಾಂಬಾರು ಜೀನಸುಗಳಿಂದ ನೇರ ಹಾಗೂ ಪರೋಕ್ಷ ತೆರಿಗೆಯ ಮೂಲಕ 500 ಕೋಟಿಗೂ ಮಿಕ್ಕಿ ಆದಾಯವನ್ನು ಗಳಿಸಿಕೊಡುತ್ತಿದೆ ಎಂದರು.
ದುಃಖದಾಯಕ ಸಂಗತಿಯೆಂದರೆ ಅಪಾರ ತ್ಯಾಗಕ್ಕೆ ಪ್ರತಿಯಾಗಿ ಅದರ ಕಾಲಾಂಶವೂ ಉಭಯ ಸರ್ಕಾರಗಳಿಂದ ಉತ್ತರ ಕನ್ನಡಕ್ಕೆ ಅತ್ಯುತ್ತಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾನಿಲಯ, ಸಂಶೋಧನಾಲಯ ಮುಂತಾದ ಪರಿಸರ ಪೂರಕ ಕೈಗಾರಿಕೆಗಳ ರೂಪದಲ್ಲಿ ಪ್ರಾಪ್ತವಾಗಿಲ್ಲ ಎಂದು ತಿಳಿಸಿದ್ದಾರೆ.
ಗಣೇಶ್ ಹೆಗಡೆ, ರಮೇಶ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ್, ಅಂಕಿತ್ ಹೆಗಡೆ, ರಾಮಕೃಷ್ಣ ಗಾಂವ್ಕರ್, ನಾರಾಯಣ ಖಂಡೇಕರ್ , ಕೆ. ಟಿ ಹೆಗಡೆ ಇದ್ದರು.
ಮನವಿ ಗಂಭೀರವಾಗಿ ಪರಿಗಣಿಸುವಂತೆ ಸಚಿವ ಎಂ.ಬಿ. ಪಾಟೀಲ್ ಗೆ ಒತ್ತಾಯ
ಈ ಮನವಿ ಗಂಭೀರವಾಗಿ ಪರಿಗಣಿಸಿ ಇದೇ ಬೆಳಗಾವಿ ಅಧಿವೇಶನದಲ್ಲಿ ಮಾಗೋಡ ಅನ್ನು ವಿಶೇಷ ಆರ್ಥಿಕ ವಲಯ, ಅಥವಾ ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸುವ ನಿರ್ಣಯ ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ತ್ಯಾಗಕ್ಕೆ ಗೌರವ ನೀಡಬೇಕು. ರಾಜ್ಯದಲ್ಲಿ ಭವಿಷ್ಯದಲ್ಲಿ ನಡೆವ ಅಂತರ ರಾಷ್ಟ್ರೀಯ ಟೆಕ್ ಸಮ್ಮಿಟ್ ನಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಸಾಫ್ಟ್ ವೇರ್ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಭಾಗದ ಯುವ ಜನಾಂಗದ ಕನಸು ನನಸಾಗಲು ಕಾರಣ ಆಗಬೇಕು ಎಂದು ಮನವಿಯಲ್ಲಿ ಅನಂತ ಮೂರ್ತಿ ಹೆಗಡೆ ಸಿರಸಿ ಅವರು ಆಗ್ರಹಸಿದರು.


