
ಮಂಗಳೂರು: ಶಾರದಾ ವಿದ್ಯಾಸಂಸ್ಥೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಧರ್ಮ ಪಾಲನೆ- ಸಂಸ್ಕೃತಿ ರಕ್ಷಣೆ, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ, ದೇಶಾಭಿಮಾನ ಮೂಡಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿನ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ಆವರಣದಲ್ಲಿ ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದ್ದರೂ, ಇಂದಿಗೂ ಅನೇಕ ಕಡೆಗಳಲ್ಲಿ ಶಿಕ್ಷಣ ಕ್ಷೇತ್ರ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಕ್ರೀಡೆಗೆ ಸರ್ವ ಪ್ರೋತ್ಸಾಹ ನೀಡುತ್ತಿದೆ. ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವುದರೊಂದಿಗೆ ವಿಶ್ವ ಮಟ್ಟದಲ್ಲಿ ಭಾರತ ಇನ್ನಷ್ಟು ಮುಂದುವರೆಯಬೇಕಿದೆ. ನಮ್ಮ ದೇಶದಲ್ಲಿ ಕಾಮನ್‌ವೆಲ್ತ್ ಕ್ರೀಡೆ ಆಯೋಜನೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಮುಂದೆ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲೇ ನಡೆಸುವ ಸುಯೋಗ ಒದಗಿಬರಲಿ ಎಂದರು.

ರಾಜ್ಯದ ಪರಂಪರೆಗೆ ಮೈಸೂರು ಹೃದಯವಾದರೆ, ಕರಾವಳಿ ಬೆನ್ನೆಲುಬು ಇದ್ದಂತೆ. ಕರಾವಳಿಯಲ್ಲಿ ರಾಜ್ಯದ ಪರಂಪರೆಯ ರಕ್ಷಣೆಯ ಕಾರ್ಯ ನಡೆಯುತ್ತಿದೆ. ನಮ್ಮ ಶಕ್ತಿ ಮೀರಿ ನಾವು ಕೆಲಸ ಮಾಡಿದರೆ ಅದು ರಾಷ್ಟ್ರಕ್ಕೆ ದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್, ಈ ಕ್ರೀಡೋತ್ಸವದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಶಾರದಾ ವಿದ್ಯಾಲಯ ಆರಂಭವಾಗಿ 33 ವರ್ಷಗಳು ಸಂದಿದ್ದು, ಮೆಕಾಲೆ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ಭಾರತೀಯ ಜೀವನ ಮೌಲ್ಯ, ಸಂಸ್ಕಾರಗಳನ್ನು, ಭಾರತೀಯ ಚಿಂತನೆಗಳಿಗೆ ಅವಕಾಶ ಕೊಡುವ ಕೆಲಸ ಮಾಡಲಾಗುತ್ತಿದೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದರು.
ಇದೇ ಸಂದರ್ಭ ಶಾರದಾ ಸಮೂಹ ಸಂಸ್ಥೆ ವತಿಯಿಂದ ಯದುವೀರ್ ಅವರಿಗೆ ಆರತಿ ಬೆಳಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ರಚಿಸಿದ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.
ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ, ಉದ್ಯಮಿ ನಾಗಾರ್ಜುನ್, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಭಟ್, ಸುನಂದಾ ಪುರಾಣಿಕ್, ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಪ್ರಮುಖರಾದ ಪ್ರದೀಪ ಕುಮಾರ ಕಲ್ಕೂರ, ರಘುನಾಥ ಸೋಮಯಾಜಿ, ಸುಧಾಕರ ರಾವ್ ಪೇಜಾವರ, ಪ್ರೊ. ಲೀಲಾ ಉಪಾಧ್ಯಾಯ, ಸೀತಾರಾಮ ಭಟ್, ಪ್ರಕಾಶ್ ಇಳಂತಿಲ, ಪ್ರಾಂಶುಪಾಲರಾದ ಪ್ರಕಾಶ್ ನಾಯಕ್, ದಯಾನಂದ ಕಟೀಲ್, ಸತ್ಯ ನಾರಾಯಣ ಭಟ್ ವಿದ್ಯಾ ಭಾರತಿಯ ಹಿರಿಯರಾದ ವಸಂತ ಮಾಧವ ಇದ್ದರು. ರಮೇಶ್ ಆಚಾರ್ಯ ನೇತೃತ್ವದ ತಂಡ ಕಾರ್ಯಕ್ರಮ ನಿರೂಪಿಸಿತು.
ಧರ್ಮ ಪಾಲನೆಯೇ ಅಗತ್ಯ: ಸಂಸದ ಯದುವೀರ್
ನಮ್ಮ ಪೂರ್ವಜರು ಧರ್ಮ ಪಾಲನೆ ಮಾಡುತ್ತಿದ್ದುದರಿಂದ ಉತ್ತಮ ಕೆಲಸ ಕಾರ್ಯಗಳನ್ನು ಅವರು ಮಾಡುವಂತಾಯಿತು. ರಾಜಪ್ರಭುತ್ವ ಈಗ ಇಲ್ಲದಿದ್ದರೂ ಅವರೆಲ್ಲರ ಹೆಸರು ಶಾಶ್ವತವಾಗಿರಲು ಧರ್ಮ ಪಾಲನೆಯೇ ಮುಖ್ಯ ಕಾರಣ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಕಾರ್ಯ ಆಗಬೇಕಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಸವಾಲು ದೊಡ್ಡದಿದ್ದರೂ, ಆ ಕಾರ್ಯ ಆಗಲೇಬೇಕಾದ ಅನಿವಾರ್ಯತೆ ಇದೆ ಎಂದು ಸಂಸದ ಯದುವೀರ್ ಹೇಳಿದರು.
ಶಾರದಾ ವಿದ್ಯಾಲಯದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಲ್ಲಕಂಬ ಕಸರತ್ತು, ಸಮೂಹ ನೃತ್ಯ, ಸಮೂಹ ಗಾಯನ, ಸ್ಕೌಟ್ಸ್ ಗೈಡ್ಸ್, ತಾಲೀಮು ಪ್ರದರ್ಶನ ಇತ್ಯಾದಿ ನೋಡುಗರ ಮನಸೂರೆಗೊಳಿಸಿತು. ನಾಲ್ಕು ಗಂಟೆಗಳ ಕಾಲ ನಡೆದ ದೈಹಿಕ ಕಸರತ್ತುಗಳು ವೀಕ್ಷಕರನ್ನು ರೋಮಾಂಚನಗೊಳಿಸಿತು. ಬೆಂಕಿಯೊಂದಿಗಿನ ಸರಸದ ಆಟಗಳು, ಸಾಹಸ ಪ್ರದರ್ಶನಗಳು ವಿದ್ಯಾರ್ಥಿಗಳ ಕಲಾ ನೈಪುಣ್ಯತೆಗೆ ಸಾಕ್ಷಿ ಆದವು. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲದಂತೆ ನಗರದ ಮಕ್ಕಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.


