
ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಈಎನ್ ಟಿಯುಸಿ) ಜಿಲ್ಲಾ ಯುವ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ವಕೀಲೆ ಕರಿಷ್ಮಾ ಎಸ್. ಅವರು ಅಧಿಕಾರ ಸ್ವೀಕಾರ ಮಾಡಿದರು.
ಈ ವೇಳೆ ಅವರು ಮಾತನಾಡಿ, ಕಾರ್ಮಿಕರಿಗೆ ಸಂಬಂಧಿಸಿದ ಯಾವುದೇ ಕಾನೂನು ಸಮಸ್ಯೆಗಳಿಗೆ ಉಚಿತ ಕಾನೂನು ಸಲಹೆ ಮತ್ತು ಅಗತ್ಯ ಇದ್ದರೆ ಉಚಿತ ಮೊಕದ್ದಮೆ ಸೌಲಭ್ಯ ಒದಗಿಸಲು ಕಾನೂನು ನೆರವು ಘಟಕವನ್ನು ರೂಪಿಸುವುದಾಗಿ ಮಹತ್ವದ ಘೋಷಣೆ ಮಾಡಿದ್ದೇನೆ ಎಂದರು.

ಇದು ನನಗೆ ಕೇವಲ ಪದಗ್ರಹಣ ಸಮಾರಂಭವಲ್ಲ; ಇದು ಭಾವನಾತ್ಮಕ ಕ್ಷಣ, ದೊಡ್ಡ ಜವಾಬ್ದಾರಿಯ ಆರಂಭ. ನಮ್ಮ ಕುಟುಂಬ ಕಾಂಗ್ರೆಸ್ ಸಿದ್ಧಾಂತವನ್ನು ಹಲವು ವರ್ಷಗಳಿಂದ ನಂಬಿಕೊಂಡು ದುಡಿದಿದೆ. ಈ ಮೌಲ್ಯಗಳೇ ನನಗೆ ನ್ಯಾಯಕ್ಕಾಗಿ ಹೋರಾಡುವ ಶಕ್ತಿ ನೀಡಿ ಬೆಳೆಸಿವೆ ಎಂದರು.
ಇಂಟಕ್ ಅನ್ನು ಸ್ವಾತಂತ್ರ್ಯಾನಂತರ ಗಾಂಧೀಜಿಯ ಆದರ್ಶಗಳು ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನ್ಯಾಯದ ಕಲ್ಪನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ ಎನ್ನುವುದನ್ನು ಅವರು ನೆನಪಿಸಿದರು. “ನೆಹರೂ ಮತ್ತು ಸರ್ದಾರ್ ಪಟೇಲ್ ಅವರ ದೃಷ್ಟಿಯಿಂದ ಹುಟ್ಟಿದ ಇಂಟಕ್ ಇಂದು ದೇಶದ ಕೋಟ್ಯಂತರ ಕಾರ್ಮಿಕರ ಬೆನ್ನೆಲುಬು. ಕಾರ್ಮಿಕರನ್ನು ‘ಓಟ್ ಬ್ಯಾಂಕ್’ ಅಲ್ಲ, ರಾಷ್ಟ್ರ ನಿರ್ಮಾಣದ ಅಡಿಪಾಯ ಎಂದು ಪರಿಗಣಿಸುವ ಏಕೈಕ ಸಂಘಟನೆ ನಮ್ಮದು ಎಂದರು.
ತನ್ನ ಅವಧಿಯಲ್ಲಿ ಹೊಸ ಕೈಗಾರಿಕೆಗಳಿಗೆ ಅಗತ್ಯ ಕೌಶಲ್ಯ ಶಿಬಿರಗಳು, ಅಸಂಘಟಿತ ಕಾರ್ಮಿಕರ ಬೀದಿ ವ್ಯಾಪಾರಿಗಳು, ಮನೆ ಕೆಲಸದವರು, ಕಟ್ಟಡ ಕಾರ್ಮಿಕರು ಇಂಟಕ್ ಅಡಿಯಲ್ಲಿ ಸಂಘಟನೆ ಹಾಗೂ ಅವರಿಗೆ ಸರ್ಕಾರದ ಯೋಜನೆಗಳು ತಲುಪುವ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಅಲ್ಲದೆ ಕೆಲಸದ ಸ್ಥಳದಲ್ಲಿ ಆರೋಗ್ಯ ಸುರಕ್ಷತೆ ಕಡ್ಡಾಯಗೊಳಿಸಲು ಅಧಿಕಾರಿಗಳಿಗೆ ಒತ್ತಡ ಹಾಕಿ ಸಮರ್ಪಕವಾಗಿ ಜಾರಿಗೆ ತರುವುದಾಗಿ ಹೇಳಿದರು.
ನ್ಯಾಯಕ್ಕಾಗಿ ಹೋರಾಡುತ್ತೇನೆ: ಕರಿಷ್ಮಾ
ನಾನು ವಕೀಲೆಯಾಗಿ ನ್ಯಾಯಕ್ಕಾಗಿ ಹೋರಾಡುತ್ತೇನೆ. ಇಂಟಕ್ ಅಧ್ಯಕ್ಷೆಯಾಗಿ ನಿಮ್ಮ ಪರ ಧ್ವನಿಯಾಗುತ್ತೇನೆ. ಕಾಂಗ್ರೆಸ್ ಕಾರ್ಯಕರ್ತೆಯಾಗಿ ಸತ್ಯ ಮತ್ತು ಸಮಾನತೆ ಪರ ನಿಲ್ಲುತ್ತೇನೆ. ಅನ್ಯಾಯವನ್ನು ಸಹಿಸದಿರೋಣ, ಒಟ್ಟಾಗಿ ಮುನ್ನಡೆಯೋಣ ಎಂದು ವಕೀಲೆ ಕರಿಷ್ಮಾ ಎಸ್ ಹೇಳಿದರು.


